ಸಾವಿನಲ್ಲಿ ನೋವು ನೀಗಿಕೊಂಡ ಪದ್ಮಪ್ರಿಯಗೆ ವಿದಾಯ
ಉಡುಪಿ, ಜೂ. 17 : ಜೀವನವೇ ಒಂದು ನಾಟಕ ಶಾಲೆ. ಈ ಶಾಲೆಯಲ್ಲಿ ಸಾಕಷ್ಟು ಹೆಣಗಿ ಕೊನೆಗೆ ಹೆಣವಾದ ಕರಂಬಳ್ಳಿಯ ಹೆಣ್ಣುಮಗಳು ಪದ್ಮಪ್ರಿಯ ಅವರ ಅಂತ್ಯ ಸಂಸ್ಕಾರ ಮಂಗಳವಾರ ಮಧ್ಯಾನ್ಹ ಇಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು. ಸ್ಥಳೀಯ ರುದ್ರಭೂಮಿಯಲ್ಲಿ ಪದ್ಮಪ್ರಿಯ ಅವರ ಕಳೇಬರವನ್ನು ಅಗ್ನಿಗೆ ಶ್ರದ್ಧೆಯಿಂದ ಅರ್ಪಿಸಲಾಯಿತು. ಹಿಂದೂ ಸಂಪ್ರದಾಯದ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರವನ್ನು ಅವರ ಪತಿ ಶಾಸಕ ಕೆ. ರಘುಪತಿಭಟ್ ನೆರವೇರಿಸಿದರು.
ಅಂತ್ಯಸಂಸ್ಕಾರದ ವೇಳೆ ಪದ್ಮಪ್ರಿಯ ಅವರ ಇಬ್ಬರು ಮಕ್ಕಳು ರಾಹುಲ್ ಮತ್ತು ರೋಹನ್ ತಾವು ಎಸಗದ ತಪ್ಪಿಗಾಗಿ ಕಣ್ಣೀರು ಸುರಿಸುತ್ತಿದ್ದರು. ಪದ್ಮ ಅವರ ಕಳೇಬರವನ್ನು ಕಂಡು ದುಃಖ ತಡೆಯಲಾರದೆ ಅವರ ತಾಯಿ ಮೂರ್ಛೆಹೋದರು. ಆನಂತರ ಆಂಬುಲನ್ಸ್‌ನಲ್ಲಿ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಉಡುಪಿಯ ಅನೇಕ ಗಣ್ಯವ್ಯಕ್ತಿಗಳು, ಭಟ್ ಕುಟುಂಬದ ಸದಸ್ಯರು ಮತ್ತು ಸ್ನೇಹಿತವರ್ಗ ಧೋಧೋ ಸುರಿವ ಮಳೆಯಲ್ಲೂ ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾಯಿತು.
ಸಂಸಾರದಲ್ಲಿ ಸರಿಗಮ ಇದ್ದದ್ದೆ. ಆದರೆ, ತಾಳಮೇಳ ತಪ್ಪಿದರೆ ಅನಾಹುತ ಕಟ್ಟಿಟ್ಟಬುತ್ತಿ ಎಂಬ ಕಠೋರ ಸತ್ಯವನ್ನು ಭಟ್ ಮತ್ತು ಪದ್ಮಪ್ರಿಯ ಸಂಸಾರ ಕರ್ನಾಟಕಕ್ಕೆ ಸಾರಿ ಹೇಳಿತು. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಕಂಡ ಅತ್ಯಂತ ವಿವಾದಾಸ್ಪದ ಸಾವು ಇದಾಯಿತು. ಇಂಥ ಘಟನೆಗಳು ನಮ್ಮ ದೇಶದ ಗಲ್ಲಿಗಲ್ಲಿಗಳಲ್ಲಿ ಸಂಭವಿಸುತ್ತವೆ. ಆದರೆ, ಪದ್ಮಪ್ರಿಯ ಅವರ ಪತಿ ಸಾರ್ವಜನಿಕ ಕ್ಷೇತ್ರದಲ್ಲಿರುವುದರಿಂದ ಸಾವಿಗೆ ಕಾರಣೀಭೂತವಾದ ಘಟನಾವಳಿಗಳಿಗೆ ಪ್ರಚಾರ ಸ್ವಲ್ಪ ಹೆಚ್ಚೇ ಸಿಕ್ಕಿತು.
ಕಳೆದವಾರ ತಮ್ಮ ಉಡುಪಿಯ ಮನೆಯಿಂದ ಏಕಾಏಕಿ ಕಣ್ಮರೆಯಾಗಿದ್ದ ಪದ್ಮಪ್ರಿಯ ಅಂತಿಮವಾಗಿ ದೆಹಲಿ ತಲುಪಿ ಅಲ್ಲಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಕೊರಳಿಗೆ ನೇಣು ಬಿಗಿದುಕೊಂಡು ಸಾವಿನಲ್ಲಿ ಶಾಂತಿ ಸಮಾಧಾನ ಕಂಡುಕೊಂಡರು. ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಯೇ ಅಥವಾ ಅವರನ್ನು ಹತ್ಯೆಗೈಯಲಾಗಿದೆಯೇ ಎಂಬ ಬಗ್ಗೆ ಸಂಶಯಗಳೆದ್ದಿದ್ದವು. ದೆಹಲಿಯ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡ ಸಂಗತಿ ದೃಢಪಟ್ಟಿತು.
(ದಟ್ಸ್‌ಕನ್ನಡ ವಾರ್ತೆ)
ಪೂರಕ ಓದಿಗೆ:
ಸೂಕ್ಷ್ಮ ಮನಸ್ಸಿನ ಪದ್ಮಪ್ರಿಯಾ ಸಾವಿನ ಕಾರಣವೇನು?
ಮುಗಿದ ಪದ್ಮಪ್ರಿಯಾ ಮರಣೋತ್ತರ ಪರೀಕ್ಷೆ
ಶಾಸಕ ರಘುಪತಿ ಪತ್ನಿ ಪದ್ಮಪ್ರಿಯಾ ನಿಗೂಢ ಸಾವು
ಶಾಸಕರಘುಪತಿ ಪತ್ನಿ ಪದ್ಮಪ್ರಿಯ ಮಾಲೂರಿನಲ್ಲಿ ಪತ್ತೆ
ಇನ್ನೂ ಕಗ್ಗಂಟಾಗಿರುವ ಪದ್ಮಪ್ರಿಯಾ ನಾಪತ್ತೆ ಪ್ರಕರಣ
ಪದ್ಮಪ್ರಿಯಾ ಪತಿ ಕೆ. ರಘುಪತಿ ಭಟ್











Click it and Unblock the Notifications