ಯಡ್ಡಿ ಶಿಕಾರಿಪುರದಿಂದ ಗೆಲ್ಲಲಿ : ಪ್ರಕಾಶ್ ಸವಾಲು
ಹುಬ್ಬಳ್ಳಿ, ಮೇ 19: ಕೂಸು ಹುಟ್ಟುವುದಕ್ಕಿಂತ ಮೊದಲು ಕುಲಾವಿ ಹೊಲೆಸಿದರು ಎನ್ನುವ ಹಾಗೆ ವರ್ತಿಸುತ್ತಿರುವ ಯಡಿಯೂರಪ್ಪ ಮೊದಲು ಶಿಕಾರಿಪುರದಲ್ಲಿ ಗೆಲ್ಲಲಿ, ಬಿಜೆಪಿ ಬಹುಮತ ಸಾಧಿಸಿಲಿ ನಂತರ ಅಲ್ಪಸಂಖ್ಯಾತ ಮತ್ತು ದಲಿತ ವ್ಯಕ್ತಿಗಳನ್ನು ಸಚಿವರನ್ನಾಗಿ ಮಾಡಲಿ ಎಂದು ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಸವಾಲು ಹಾಕಿದರು.
ಅಂತಿಮ ಹಂತದ ಚುನಾವಣೆ ಪ್ರಚಾರ ಕಾರ್ಯ ತಾರಕಕ್ಕೇರಿದ್ದು, ರಾಜ್ಯ ಮತ್ತು ರಾಷ್ಟ್ರ ನಾಯಕರು ಉತ್ತರ ಕರ್ನಾಟಕದ ಬಿರು ಬಿಸಿಲನ್ನು ಲೆಕ್ಕಿಸದೇ ತಮ್ಮ ಅಭ್ಯರ್ಥಿಗಳ ಮತಯಾಚಿಸತೊಡಗಿದ್ದಾರೆ. ಈ ಮಧ್ಯೆ ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಪರ ಪ್ರಚಾರಕ್ಕೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೂ ಚುನಾವಣೆ ಪೂರ್ಣಗೊಂಡಿಲ್ಲ. ಫಲಿತಾಂಶವೂ ಬಂದಿಲ್ಲ, ಆಗಲೇ ನಾನು ಮುಖ್ಯಮಂತ್ರಿಯಾಗುವೆ ಎಂದು ಪ್ರಚಾರ ಮಾಡುತ್ತಿರುವುದು ಹಾಸ್ಯಾಸ್ಪದ. ಮತದಾರರು ಪ್ರಜ್ಞಾವಂತರಿದ್ದು, ದಲಿತರನ್ನು, ಅಲ್ಪಸಂಖ್ಯಾತರನ್ನ ಮಂತ್ರಿ ಮಾಡುತ್ತೇನೆ ಎಂದಾಕ್ಷಣ ಮರಳಾಗಲು ಸಾಧ್ಯವಿಲ್ಲ. ಮೊದಲು ಅವರು ಶಿಕಾರಿಪುರದಲ್ಲಿ ಗೆದ್ದು ಬರಲಿ, ಬಿಜೆಪಿಗೆ ಬಹುಮತ ಬರಲಿ ಆನಂತರ ಸಚಿವ ಸ್ಥಾನದ ಆಮಿಷ ನೀಡಲಿ ಕಟಕಿಯಾಡಿದರು.
ಬಿಜೆಪಿ ಪಕ್ಷ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರಿದೆ. ಗಣಿಧಣಿಗಳ ಹೆಂಡ ಮತ್ತು ಹಣದ ಕಾರುಬಾರು ಬರೀ ಬಳ್ಳಾರಿ ಜಿಲ್ಲೆಗೆ ಮಾತ್ರ ಸಿಮೀತವಾಗದೆ.ಇತರೆ ಜಿಲ್ಲೆಗಳಿಗೂ ವ್ಯಾಪಿಸಿರುವುದು ದುರಂತದ ಸಂಗತಿ. ದುಡ್ಡಿನಿಂದ ಏನಾದರೂ ಮಾಡಬಹುದು ಎಂದು ದುರಹಂಕಾರದಿಂದ ಮೆರೆಯುತ್ತಿರುವ ಗಣಿಧಣಿಗಳನ್ನು ಮಟ್ಟಹಾಕಬೇಕು. ಇಲ್ಲದಿದ್ದರೇ ರಾಜ್ಯ ಸ್ಥಿತಿ ಶೋಚನೀಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications