• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರವೇ ಸಮಾವೇಶದಿಂದ ಕನ್ನಡಿಗರ ಆತ್ಮವಿಶ್ವಾಸ ಹೆಚ್ಚಳ

By Staff
|

ಕರವೇ ಸಮಾವೇಶದಲ್ಲಿ ಕನ್ನಡಿಗರ ಹರ್ಷ

ಬೆಂಗಳೂರು, ಡಿ.1 : ರಾಜಧಾನಿಯ ತುಂಬೆಲ್ಲ ಅರಿಶಿಣ ಕುಂಕುಮ ಚೆಲ್ಲಾಡಿದಂತೆ ಕಾಣುತ್ತಿದೆ. ಬೆಂಗಳೂರು ಯಾವಾಗಲೂ ಹೀಗೆಯೇ ಇದ್ದರೆ ಎಷ್ಟು ಚೆನ್ನ ಅನ್ನಿಸುತ್ತಿದೆ. ಎಲ್ಲೆಡೆ ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಧ್ವಜಗಳು ಎದ್ದು ನಿಂತಿವೆ. ಶುಕ್ರವಾರ ಮತ್ತು ಶನಿವಾರದ 6ನೇ ಸ್ವಾಭಿಮಾನಿ ಕನ್ನಡಿಗರ ಸಮಾವೇಶ, ಕನ್ನಡಿಗರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ರಾಜ್ಯದೆಲ್ಲೆಡೆಯಿಂದ ಜನ ಸಾಗರ ಹರಿದು ಬಂದಿದೆ. ಲಕ್ಷಾಂತರ ಜನರು, ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಪುಳಕಗೊಂಡರು. ಇಲ್ಲಿನ ವೇದಿಕೆಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಕಲಾ ಪ್ರದರ್ಶನ ನಡೆದವು. ಶನಿವಾರ ಬೆಳಗ್ಗೆ 11ಗಂಟೆಗೆ ನಗರದ ಸರ್ಕಾರಿ ಕಲಾ ಕಾಲೇಜಿನ

ಮೈದಾನದಿಂದ ಆರಂಭವಾದ ಕನ್ನಡ ಜಾಥಾ, ಅರಮನೆ ಮೈದಾನದಲ್ಲಿ ಕೊನೆಗೊಂಡಿತು. ಅಲ್ಲಿ ನಡೆದ ಸಮಾರಂಭದಲ್ಲಿ ದೇಜಗೌ, ಸುತ್ತೂರು ಶ್ರೀ, ಗೋಸಾಯಿ ಮಠದ ಶ್ರೀ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಪಾಟೀಲ್ ಪುಟ್ಟಪ್ಪ ಅವರಿಗೆ ಸ್ವಾಭಿಮಾನಿ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾಡುನುಡಿಯ ಕಾಳಜಿ ಹೊಂದಿದ್ದ ಯುವಪೀಳಿಗೆ ಮಾತ್ರವಲ್ಲದೇ, ಹೆಂಗಸರು, ಮಕ್ಕಳು, ಮುದುಕರು ಸಹಾ ಸಮಾವೇಶದಲ್ಲಿ ಪಾಲ್ಗೊಂಡದ್ದು ನಿಜಕ್ಕೂ ವಿಶೇಷ. ಸಮಾವೇಶದಲ್ಲಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ, 30ಅಂಶಗಳ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.

ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು, ಸರೋಜಿನಿ ಮಹಿಷಿ ಮತ್ತು ಡಾ.ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಬರಬೇಕು, ಡಿಸೆಂಬರ್ ಒಳಗಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ಮಾನ ನೀಡಬೇಕು, ಪರಭಾಷಾ ಉದ್ಯಮಿಗಳಿಗೆ ಕಡಿವಾಣ ಹಾಕಬೇಕು, ಚುನಾವಣೆಯಲ್ಲಿ ಕನ್ನಡಿಗರಿಗಷ್ಟೇ ಟಿಕೆಟ್ ನೀಡಬೇಕು ಸೇರಿದಂತೆ 30ಅಂಶಗಳನ್ನು ನಿರ್ಣಯ ಒಳಗೊಂಡಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X