• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸಕ್ರಮ'ವೇ ಅಕ್ರಮ : ಸಾರ್ವಜನಿಕರ ದೂರು, ಕೋರ್ಟ್‌ಗೆ ಮೊರೆ

By Staff
|

'ಸಕ್ರಮ'ವೇ ಅಕ್ರಮ : ಸಾರ್ವಜನಿಕರ ದೂರು, ಕೋರ್ಟ್‌ಗೆ ಮೊರೆಬೆಂಗಳೂರು, ನ.27 : ರಾಜ್ಯ ಸರ್ಕಾರ ಪ್ರಾರಂಭಿಸಿರುವ 'ಅಕ್ರಮ-ಸಕ್ರಮ' ಯೋಜನೆ ಜನತೆಯನ್ನು ಸಂಕಷ್ಟದಲ್ಲಿ ನೂಕಿಬಿಟ್ಟಿದೆ. ಇದು ಯಾರಿಗೆ ಅನ್ವಯವಾಗುತ್ತದೆ? ಅಕ್ರಮ ಅಂದರೆ ಏನು? ಎಷ್ಟು ಜುಲ್ಮಾನೆ ಕಟ್ಟಬೇಕು? ಹಿಂದಿರುವ ಉದ್ದೇಶವಾದರೂ ಏನು? ಇದ್ದಕ್ಕಿದ್ದಂತೆ ಲಕ್ಷಾನುಗಟ್ಟಲೆ ಹಣ ಕಟ್ಟಬೇಕಾದರೆ ಹೇಗೆ ಹೊಂದಿಸಬೇಕು ಮುಂತಾದ ಪ್ರಶ್ನೆಗಳು ಧುತ್ತನೆ ಎದ್ದು ನಿಂತಿವೆ.

ಭರಿಸಲಾಗದ ಮೊತ್ತ, ಭರ್ತಿ ಮಾಡಲಾಗದ ಅರ್ಜಿ, ಅರಗಿಸಿಕೊಳ್ಳಲಾಗದ ನಿಯಮಗಳು, ನೀಡಬೇಕಾಗಿರುವ ದಾಖಲಾತಿಗಳು ಸಾರ್ವಜನಿಕರನ್ನು ತಿರುಗುಣಿಯಲ್ಲಿ ಸಿಕ್ಕಿಸಿದಂತಾಗಿದೆ.

ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ ಡಿಸೆಂಬರ್ 14, ಸಂಜೆ 5.30ರೊಳಗೆ. ಈ ದಿನಾಂಕವನ್ನು ವಿಸ್ತರಿಸಲಾಗದು ಎಂದು ಬಿಬಿಎಂಪಿ ಸ್ಪಷ್ಟವಾಗಿ ಹೇಳಿದೆ. ಈಗ ಕಟ್ಟಬೇಕಾದ ಮೊತ್ತವೇ ಭರಿಸಲಾಗದ್ದು, ಇನ್ನು ಅರ್ಜಿ ಗುಜರಾಯಿಸಲಾಗದೇ ನಂತರ ವಿಧಿಸಲಾಗುವ ಪೆನಾಲ್ಟಿಯನ್ನು ಭರಿಸುವುದು ಎಂತು ಎಂದು ಕಳವಳಕ್ಕೀಡಾಗಿದ್ದಾರೆ. 'ಹುಚ್ಮುಂಡೆ ಮದುವೆಯಲ್ಲಿ ಉಂಡೋನೆ ಜಾಣ' ಎಂಬಂತೆ ಸಾಲೋ ಸಾಲು ಬ್ಯಾಂಕ್‌ಗಳು ಸಾವರ್ಜನಿಕರಿಗೆ ಸಾಲವನ್ನು ನೀಡಲು ಮುಂದೆ ಬಂದಿವೆ. ಇದು ಕೂಡ ಬಿಬಿಎಂಪಿ ಮತ್ತು ಬ್ಯಾಂಕ್‌ಗಳು ಜನರನ್ನು ದೋಚುವ ಹುನ್ನಾರವೇ ಎಂದು ಜನ ಟೀಕಿಸುತ್ತಿದ್ದಾರೆ.

ಈ ಬಗ್ಗೆ ಬಿಬಿಎಂಪಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳಿದರೆ ಸರಿಯಾಗಿ ಉತ್ತರಿಸುತ್ತಿಲ್ಲ. ಇದು ಸರ್ಕಾರದ ಯೋಜನೆ ಜಾರಿ ಬಿಬಿಎಂಪಿ ಮಾಡಲಾಗುತ್ತಿದೆ. ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ನುಣುಚಿಕೊಳ್ಳುತ್ತಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವವರ ಪಾಡಂತೂ ನಾಯಿಪಾಡಾಗಿದೆ. ಫ್ಲಾಟ್‌ಗಳಲ್ಲಿ ವಾಸವಾಗಿರುವವರಿಂದ ಪ್ರತ್ಯೇಕವಾಗಿ ಅರ್ಜಿಯನ್ನು ಸ್ವೀಕರಿಸುತ್ತಿಲ್ಲ. ಅಪಾರ್ಟ್‌ಮೆಂಟ್ ವಾಸಿಗಳು ಒಟ್ಟಾರೆಯಾಗಿ ಅಸೋಸಿಯೇಷನ್ ಮುಖಾಂತರ ಅರ್ಜಿ ಗುಜರಾಯಿಸಬೇಕು. ಸಮಯ ಕಡಿಮೆಯಿದ್ದರಿಂದ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಅರ್ಜಿ ಗುಜರಾಯಿಸಲು ವಸತಿಸಮುಚ್ಚಯದವರು ತೊಳಲಾಡುತ್ತಿದ್ದಾರೆ.

ಬಿಡಿಎ, ಬಿಎಂಆರ್ಡಿಗಳಿಂದ ಪರವಾನಗಿ ತೆಗೆದುಕೊಂಡು ಕಟ್ಟಡ ನಿರ್ಮಿಸಿಕೊಂಡವರು ಈ ಜುಲ್ಮಾನೆಯನ್ನು ಕಟ್ಟಬೇಕೆ ಎಂಬ ಬಗ್ಗೆಯೂ ಗೊಂದಲಗಳಿವೆ. ಅಕ್ರಮ ಸಕ್ರಮ ಮಾಡಿಬೇಕಾದದ್ದು ಕಟ್ಟಡ ಡೆವಲಪರ್ಸ್‌ಗಳ ಜವಾಬ್ದಾರಿ. ಆದರೆ ಅವರೀಗ ವಾಸಿಸುತ್ತಿರುವವರ ಮೊರೆಗೆ ಕಿವಿಗೊಡುತ್ತಿಲ್ಲ. ಯಾರೋ ಮಾಡಿದ ಅನ್ಯಾಯಕ್ಕೆ ನಾವು ದಂಡ ತೆರಬೇಕಾಗಿದೆಯಲ್ಲ ಎಂದು ಫ್ಲಾಟ್ ಮಾಲಿಕರು ಸಂಕಟಪಡುವಂತಾಗಿದೆ.

ಕೋರ್ಟ್‌ಗೆ ಮೊರೆ : ಸಕ್ರಮ ಯೋಜನೆಯನ್ನು ವಿರೋಧಿಸಿ ಅನೇಕರು ಈಗಾಗಲೆ ಹೈಕೋರ್ಟ್‌ನ ಮೆಟ್ಟಿಲನ್ನು ಹತ್ತಿದ್ದಾರೆ. ಬ್ಯಾಟರಾಯನಪುರ ನಗರಸಭೆ ವ್ಯಾಪ್ತಿಯ ಪ್ರಕೃತಿ ಟೌನ್‌ಷಿಪ್ ರೆಸಿಡೆಂಟ್ಸ್ ಅಸೋಸಿಯೇಷನ್‌ರವರು ಸರ್ಕಾರದ ಈ ಯೋಜನೆ ಸುಲಿಗೆ ಮಾಡುವ ತಂತ್ರವಾಗಿದೆ. ಇದನ್ನು ರದ್ದುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.

ಈ ಮೊದಲು ಎಲ್ಲ ಡೆವಲಪ್‌ಮೆಟ್ ಚಾರ್ಜ್, ವರ್ಷವರ್ಷಕ್ಕೂ ತೆರಿಗೆ ಸರಿಯಾಗಿ ಕಟ್ಟಿಕೊಂಡು ಬಂದಿದ್ದೇವೆ ಆದರೂ ಈಗ ಮತ್ತೆ ಕಟ್ಟಬೇಕಿರುವುದು ಅನ್ಯಾಯದ ಪರಮಾವಧಿ ಎಂದು ಅರ್ಜಿಯಲ್ಲಿ ಅಲವತ್ತುಕೊಂಡಿದ್ದಾರೆ.

ಬಿಬಿಎಂಪಿ ನೌಕರರಿಗೆ ಸುಗ್ಗಿ : ಕ್ಲಿಷ್ಟವಾದ ಅರ್ಜಿಯನ್ನು ತುಂಬಲು ಸಾಮಾನ್ಯರು ತಡಕಾಡುತ್ತಿದ್ದಾರೆ. ಇದನ್ನು ನಾವೇ ತುಂಬಿಕೊಡುತ್ತೇವೆಂದು ಸಾರ್ವಜನಿಕರನ್ನು ಪುಸಲಾಯಿಸಿ ಬಿಬಿಎಂಪಿ ನೌಕರರು ಹಣ ಕಿತ್ತುಕೊಳ್ಳುತ್ತಿದ್ದಾರೆ. ಇಲ್ಲಿ ಲಂಚ ನೀಡದೇ ಯಾವುದೂ ಸಕ್ರಮವಾಗುವುದಿಲ್ಲ ಎನ್ನುವುದು ಬಹುತೇಕ ಜನರ ದೂರು.

ಈ ಅರ್ಜಿ ಗುಜರಾಯಿಸಲು 2007-08ನೇ ಸಾಲಿನ ತೆರಿಗೆ ಕಟ್ಟಬೇಕಿರುವುದು ಅನಿವಾರ್ಯ. ಈ ತೆರಿಗೆ ಕಟ್ಟಬೇಕೆಂದರೆ ಅದರೊಂದಿಗೆ ಖಾತಾದ ಕಾಪಿಯನ್ನು ಲಗತ್ತಿಸಬೇಕು. ಆದರೆ ಬಿಬಿಎಂಪಿಯವರು ಮುನ್ಸಿಪಾಲ್ಟಿಯವರು ನೀಡಿರುವ ಖಾತಾವನ್ನು ಪರಿಗಣನೆಗೇ ತೆಗೆದುಕೊಳ್ಳುತ್ತಿಲ್ಲ. ಬಿಬಿಎಂಪಿಯಲ್ಲಿ ಮತ್ತೆ ಖಾತಾ ಮಾಡಿಸಲು ಮತ್ತೆ ಶುಲ್ಕ ಅದರೊಂದಿಗಿಷ್ಟು ಲಂಚ ನೀಡಬೇಕೆಂದು ಗೋಳಾಡುತ್ತಿದ್ದಾರೆ ಅನೇಕರು.

ಕಾಂಗ್ರೆಸ್ ಪ್ರತಿಭಟನೆ : ಜನವಿರೋಧಿ ಯೋಜನೆಯನ್ನು ನವೆಂಬರ್ 30ರೊಳಗೆ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಡಿಸೆಂಬರ್ 1ರಂದು ಪಾಲಿಕೆಯನ್ನು ಮುತ್ತಿಗೆ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ. ಅಕ್ರಮವಾಗಿ ಭೂಪರಿವರ್ತನೆ ಶುಲ್ಕ ಕಟ್ಟಿಸಿಕೊಂಡು ಕಟ್ಟಡ ನಿರ್ಮಿಸಲು ಅನುಕೂಲ ಮಾಡಿಕೊಟ್ಟ ಸರ್ಕಾರ ಈಗ ತಾನು ಮಾಡಿದ ತಪ್ಪಿಗೆ ಜನತೆಯಿಂದ ದಂಡ ಕಟ್ಟಿಸಿಕೊಳ್ಳುತ್ತಿದೆ ಎಂದು ಮಾಜಿ ಶಾಸಕ ಎಂ.ಆರ್.ಸೀತಾರಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಸಕ್ರಮ ಮಾಡಬೇಕಾಗಿರುವುದು ಸರಿಯಾದ ಮಾರ್ಗವೇ. ಆದರೆ ಇದು ಅನ್ಯಾಯದ ಹಣಗಳಿಕೆಗೆ ದಾರಿಯಾಗಬಾರದು,ಸರಳವಾಗಿರಬೇಕು ಮತ್ತು ಸಾರ್ವಜನಿಕರ ಕೈಗೆಟಕುವಂತಿರಬೇಕು ಎಂಬುದು ಜನಸಾಮಾನ್ಯರ ಉವಾಚ. ಇದೇ ಸಮಯದಲ್ಲಿ ಜನರನ್ನು ದಾರಿತಪ್ಪಿಸಿ ಸರಳವಾಗಿದ್ದರೂ ಕ್ಲಿಷ್ಟವಾಗಿಸಿ ಜನರನ್ನು ದೋಚುತ್ತಿರುವ ನೌಕರರ ಮೇಲೆ ಪಾಲಿಕೆ ಕ್ರಮಕೈಗೊಳ್ಳಬೇಕಾಗಿರುವುದೂ ಅನಿವಾರ್ಯವಾಗಿದೆ. ಲಂಚಕೋರರ ಮೇಲೆ ಲೋಕಾಯುಕ್ತರೂ ಒಂದು ಕಣ್ಣಿಟ್ಟಿರಬೇಕು.

ಈ ಅಕ್ರಮ ಸಕ್ರಮದ ಪರಿಣಾಮ ಬಾಡಿಗೆದಾರರ ಮೇಲಾದರೂ ಆಶ್ಚರ್ಯವಿಲ್ಲ!

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more