ಪಿಜ್ಜಾ ತಿನ್ನೋದರಲ್ಲಿ ಭಾರತೀಯರು ಹಿಂದೆಬಿದ್ದಿಲ್ಲ! ಛೇ!
ನವದೆಹಲಿ, ಸೆಪ್ಟೆಂಬರ್ 03 : ಪಿಜ್ಜಾಗಳು ಬರೀ ಅಮೆರಿಕದಲ್ಲಷ್ಟೇ ಅಲ್ಲ, ನಮ್ಮ ದೇಶದಲ್ಲೂ ಹೆಚ್ಚುಹೆಚ್ಚು ಖರ್ಚಾಗುತ್ತಿವೆ! ಅದೂ ಎಷ್ಟು ಗೊತ್ತೆ? ತಿಂಗಳೊಂದಕ್ಕೆ 3 ದಶಲಕ್ಷ ಪಿಜ್ಜಾಗಳು ಭಾರತೀಯರ ಹೊಟ್ಟೆ ಸೇರುತ್ತಿವೆ!
ಭಾರತದಲ್ಲಿ ಮಾರಾಟವಾಗುತ್ತಿರುವ ಪಿಜ್ಜಾಗಳ ವ್ಯಾಪಾರಿ ವಹಿವಾಟು ಬರೋಬ್ಬರಿ 600 ಕೋಟಿ ರೂ.ಗಳು. ಡೊಮಿನೊ ಮತ್ತು ಪಿಜ್ಜಾ ಹಟ್ ಶೇ.75ಕ್ಕೂ ಅಧಿಕ ಮಾರುಕಟ್ಟೆಯನ್ನು ಆಕ್ರಮಿಸಿವೆ. ಭಾರತೀಯರ ಪಿಜ್ಜಾ ಚಪಲ ಹೀಗೇ ಮುಂದುವರಿದರೆ, ಮುಂದಿನ ನಾಲ್ಕು ವರ್ಷಗಳಲ್ಲಿ ಇದರ ಮಾರಾಟ ದುಪ್ಪಟ್ಟಾಗಲಿದೆ.
ಇಂದಿನ ಫಾಸ್ಟ್‌ಫುಡ್ ಯುಗದಲ್ಲಿ ಪಿಜ್ಜಾ ಎನ್ನುವ ಉತ್ಪನ್ನ ಬಹಳಷ್ಟು ಜನರಿಗೆ ಪ್ರಿಯವಾಗಿದೆ ಎನ್ನುತ್ತಾರೆ ಪಿಜ್ಜಾ ಹಟ್‌ನ ಮಾರುಕಟ್ಟೆ ನಿರ್ದೇಶಕ ಅನೂಪ್ ಜೈನ್. ಪಿಜ್ಜಾ ಹಟ್‌ನಲ್ಲಿ ತಿಂಗಳೊಂದಕ್ಕೆ 1.4 ದಶಲಕ್ಷ ಪಿಜ್ಜಾಗಳು ಮಾರಾಟವಾಗುತ್ತಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರತೀ ವರ್ಷ ಶೇ. 20ರಷ್ಟು ಮಾರುಕಟ್ಟೆಯನ್ನು ವೃದ್ಧಿಸಿಕೊಳ್ಳಲು ಯೋಜಿಸಿರುವುದಾಗಿ ಜೈನ್ ತಿಳಿಸಿದ್ದಾರೆ.
134 ರೆಸ್ಟೊರೆಂಟ್‌ಗಳ ಮೂಲಕ 34 ನಗರಗಳಲ್ಲಿ ಪಿಜ್ಜಾ ಹಟ್ ಇದೆ. ಪಿಜ್ಜಾ ಹಟ್‌ನ ಪ್ರತಿಸ್ಪರ್ಧಿ ಡೊಮಿನೋಸ್ ಪಿಜ್ಜಾ ಇಂಡಿಯಾ ಲಿ., 2011ರ ಹೊತ್ತಿಗೆ 500 ರೆಸ್ಟೋರೆಂಟ್‌ಗಳನ್ನು 50 ನಗರಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಒಟ್ಟಿನಲ್ಲಿ ಭಾರತೀಯರು ಪಿಜ್ಜಾ ಪ್ರಿಯರಾಗುತ್ತಿದ್ದಾರೆ ಅನ್ನುವುದು ಇದರಿಂದ ದೃಢವಾಗುತ್ತದೆ.
(ಏಜನ್ಸೀಸ್)












Click it and Unblock the Notifications