ಘೋರ! ಇದು ಅತಿ ಘೋರ!- ಮುನಿದ ಪ್ರಕೃತಿ ಮಾತೆಯಿಂದ ತಾಂಡವ ನರ್ತನ !
ಘೋರ! ಇದು ಅತಿ ಘೋರ!- ಮುನಿದ ಪ್ರಕೃತಿ ಮಾತೆಯಿಂದ ತಾಂಡವ ನರ್ತನ !
ಕ್ರಿಸ್‌ಮಸ್ ಸಂಭ್ರಮ ಮುಗಿಯುವ ಮೊದಲೇ ದುರಂತ ಬಂದು ಅಪ್ಪಳಿಸಿದೆ. ವರ್ಷದ ಕಡೆಯಲ್ಲಿ ಪ್ರಕೃತಿ ಮಾತೆ ಮುನಿದಿದ್ದಾಳೆ. ಭೂಮಿ ನಡುಗಿ ಕಂಪಿಸಿದ್ದಾಳೆ. ಕಡಲು ಹುಚ್ಚಾಪಟ್ಟೆ ಕುಣಿದು ಕುಪ್ಪಳಿಸಿದ್ದಾಳೆ. ಆ ಪರಿಣಾಮ ದಕ್ಷಿಣ ಏಷ್ಯಾದ ಭಾರತ, ಶ್ರೀಲಂಕಾ, ಮಲೇಷಿಯಾ, ಥಾಯ್ಲೆಂಟ್, ಇಂಡೋನೇಷ್ಯಾ ಮತ್ತಿತರ ರಾಷ್ಟ್ರಗಳಲ್ಲಿ ಸಾವಿನ ಸಂಖ್ಯೆ ಸೋಮವಾರ(ಡಿ.27) ಹದಿನೈದು ಸಾವಿರ ತಲುಪಿದೆ.
- ದಟ್ಸ್‌ಕನ್ನಡ ಬ್ಯೂರೊ
![]() ![]() ![]() ![]() ![]() |
ಇಂಡೋನೇಷ್ಯಾದ ಸುಮಾತ್ರ ದ್ವೀಪದ ಪಶ್ಚಿಮ ಕಡಲಿನಲ್ಲಿ ಭೂಕಂಪನದ ಕೇಂದ್ರಬಿಂದು ಇದ್ದು, ಭಾನುವಾರ(ಡಿ.26) ರಿಕ್ಟರ್ ಮಾಪಕದಲ್ಲಿ 8.9ರಷ್ಟು ಭಾರಿ ಭೂಕಂಪ ಸಂಭವಿಸಿದೆ. ಭೂಮಿಯ 40 ಕಿ.ಮೀ ಆಳದಲ್ಲಿ ಎದ್ದ ಕಂಪನದಿಂದಾಗಿ ಕಡಲಲ್ಲಿ ದೈತ್ಯ ಅಲೆಗಳು ಎದ್ದಿವೆ. ಗಂಟೆಗೆ 500 ಕಿ.ಮೀ. ವೇಗದಿಂದ ಚಲಿಸುವ ಈ ಅಲೆಗಳು ಭೂಮೇಲ್ಮೈಗೆ ಬರುತ್ತಿದ್ದಂತೆ ರಾಕ್ಷಸ ಶಕ್ತಿಯನ್ನು ಪಡೆಯುತ್ತವೆ. ಈ ದೈತ್ಯ ಅಲೆಗಳನ್ನೇ ಜಪಾನಿ ಭಾಷೆಯಲ್ಲಿ ‘ಸುನಾಮಿ’ ಎಂದು ಕರೆಯುತ್ತಾರೆ.
ಜಪಾನ್, ಇಂಡೋನೇಷ್ಯಾದಂಥ ರಾಷ್ಟ್ರಗಳಲ್ಲಿ ಮಾತ್ರ ಸಂಭವಿಸುವ ಇಂಥ ಅವಗಢಗಳು ಭಾರತದಲ್ಲಿ ವಿರಳ. ಇಂಥ ಪ್ರಕೋಪಗಳನ್ನು ಎದುರಿಸಲು ಭಾರತ ಯಾವುದೇ ಸಿದ್ಥತೆ ಮಾಡಿಕೊಂಡಿಲ್ಲ. ಸುನಾಮಿ ಉಪಗ್ರಹಗಳದ ಕಣ್ಣು ತಪ್ಪಿಸಿರುವುದರಿಂದ ಮುಂಜಾಗ್ರತೆವಹಿಸಿಲು ಸಾಧ್ಯವಾಗಿಲ್ಲ. ದಕ್ಷಿಣ ಭಾರತದಲ್ಲಿ ಅತೀ ಹಚ್ಚು ನಷ್ಟ ಸಂಭವಿಸಿದ್ದು ತಮಿಳು ನಾಡಿನಲ್ಲಿ . ಪಾಂಡಿಚೇರಿ ಮತ್ತು ತಮಿಳುನಾಡಿನಲ್ಲಿ 2500, ಆಂಧ್ರದಲ್ಲಿ 250, ಕೇರಳದಲ್ಲಿ 123, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 3000, ಪಶ್ಚಿಮ ಬಂಗಾಲದಲ್ಲಿ 5, ಕರ್ನಾಟಕದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಕಲ್ಪಾಕಂ ಅಣುಸ್ದಾವರ ಅಪಾಯದಿಂದ ಬಚಾವಾಗಿದೆ.
ಬೆಳಿಗ್ಗೆ 6.29(ಭಾರತೀಯ ಕಾಲಮಾನ)ಕ್ಕೆ ಈ ಘಟನೆ ಸಂಭವಿಸಿದ್ದು, ದುರಂತದ ಪರಿಣಾಮ ಇಂಡೋನೇಷ್ಯಾದಲ್ಲಿ ಸುಮಾರು 4000 ಮಂದಿ ಸಾವನ್ನಪ್ಪಿದ್ದಾರೆ. 17000 ದ್ವೀಪಗಳಿಂದ ಕೂಡಿದ ಇಂಡೋನೇಷ್ಯಾದಲ್ಲಿ ಭೂಕಂಪ ಮತ್ತು ಜ್ವಾಲಾಮುಖಿ ಸಾಮಾನ್ಯ. ಆದರೆ ಕಳೆದ 40 ವರ್ಷಗಳಲ್ಲಿ ಇಂತಹ ದುರಂತ ಸಂಭವಿಸಿರಲಿಲ್ಲ. ಹಳ್ಳಿ-ಪಟ್ಟಣಗಳು ಪೂರ್ತಿ ನಾಶವಾಗಿವೆ. ಲಕ್ಷಾಂತರ ಮಂದಿ ನಿರ್ಗತಿಕರಾಗಿದ್ದಾರೆ. ಆಸ್ತಿನಷ್ಟದ ಅಂದಾಜು ಈಗ ಸಾಧ್ಯವಾಗುತ್ತಿಲ್ಲ. ವಿಶ್ವದೆಲ್ಲೆಡೆ ತಲ್ಲಣಗೊಳಿಸಿದ ಶತಮಾನದ ಐದನೇ ದೊಡ್ಡ ಭೂಕಂಪ ಇದಾಗಿದೆ.
ಜೀವ ಉಳಿಸಿಕೊಳ್ಳಲು ಎತ್ತರದ ಪ್ರದೇಶ ಹತ್ತಿದರು ಫಲಕಾರಿಯಾಗಿಲ್ಲ. ಎಲ್ಲೆಲ್ಲೂ ಸಾವಿನ ಸಮಾಚಾರ, ನೋವಿನ ಸಾಮ್ರಾಜ್ಯ. ಮರಗಳು, ಕಟ್ಟಡಗಳು ಒಟ್ಟಾರೆ ಕಂಡಕಂಡಲ್ಲಿ ಹೆಣಗಳು ಕಾಣಿಸುತ್ತಿವೆ. ಮಾಲ್ಡೀವ್ಸ್ ದ್ವೀಪಕ್ಕೆ ತೆರಳಿದ್ದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಥಾಯ್ಲೆಂಡ್‌ನಲ್ಲಿ ದುರಂತದ ಪರಿಣಾಮ 279 ಮಂದಿ ಮೃತಪಟ್ಟಿದ್ದಾರೆ. ಶ್ರೀಲಂಕದ ಪೂರ್ವ ಮತ್ತು ದಕ್ಷಿಣ ವಲಯದಲ್ಲಿ ಅಪಾರ ಹಾನಿಯಾಗಿದ್ದು, ಸುಮಾರು 3558 ಮಂದಿ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಕೊಲಂಬೊದಲ್ಲಿ 500 ಕ್ಕೂ ಹೆಚ್ಚು ಕೈದಿಗಳ ಪರಾರಿಯಾಗಿದ್ದಾರೆ. ಕಾರೈಕಲ್‌ನಲ್ಲಿ 100ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಸುನಾಮಿ ವೇಗ ಎಷ್ಟಿತ್ತು ಎಂದರೆ, ಆ ಸಂದರ್ಭದಲ್ಲಿ ಬೈಕು, ಕಾರು, ಟ್ರಕ್ಕುಗಳು ಗಾಳಿಯಲ್ಲಿ ತೆಲಾಡಿವೆ. ಕಾಣೆಯಾದವರನ್ನು ಹೆಲಿಕಾಪ್ಟರ್‌ನಲ್ಲಿ ಹುಡುಕಲಾಗುತ್ತಿದೆ.
ಇಂಡೋನೇಷ್ಯಾದ ಸುಮಾತ್ರದಲ್ಲಿ ಭೂಕಂಪನದಿಂದ ಉದ್ಭವಿಸಿದ ಸುನಾಮಿ ಅಲೆಗಳು ಪ್ರತಿಗಂಟೆಗೆ 500 ಕಿ.ಮೀ ವೇಗದಲ್ಲಿ ಭಾರತಕ್ಕೆ ಅಪ್ಪಳಿಸಿವೆ. ಸುನಾಮಿ ಅಲೆಗಳು ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಯ ತೀರದ ಪ್ರದೇಶಗಳಿಗೆ ವ್ಯಾಪಿಸಿ ಅಪಾರ ಸಾವು ನೋವು ಸಂಭವಿಸಿದೆ.
ತಮಿಳುನಾಡಿನ ಕನ್ಯಾಕುಮಾರಿಯ ಇತಿಹಾಸ ಪ್ರಸಿದ್ಧ ವಿವೇಕಾನಂದ ಶಿಲಾಸ್ಮಾರಕ ನೋಡಲು ಹೋಗಿದ್ದ 800 ಪ್ರವಾಸಿಗರನ್ನು ಪಾರುಮಾಡಲು ವಾಯುಪಡೆ ಪ್ರಯತ್ನ ಮುಂದುವರೆಸಿದೆ. ಅಂಡಮಾನ್ ನಿಕೋಬಾರ್‌ನ ಕೆಲ ದ್ವೀಪಸಮೂಹದೊಂದಿಗೆ ಇನ್ನೂವರೆಗೂ ಸಂಪರ್ಕ ಏರ್ಪಟ್ಟಿಲ್ಲ. ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದೆಂದು ಅಂದಾಜಿಸಲಾಗಿದೆ.
ಮತ್ತೆ ಕಂಪನ : ಅಂಡೋಮಾನ್ ಮತ್ತು ನಿಕೋಬರ್ ದ್ವೀಪದಲ್ಲಿ ಸೋಮವಾರ ಮತ್ತೆ ಭೂಕಂಪ ಸಂಭವಿಸಿದೆ. ಸಾವು ನೋವಿನ ವರದಿಗಳಿನ್ನು ಬಂದಿಲ್ಲ. ರಿಕ್ಟರ್ ಮಾಪನದಲ್ಲಿ ಭೂಕಂಪದ ತೀವ್ರತೆ 6.0ಯಷ್ಟಿತ್ತು ಎಂದು ವರದಿಗಳು ತಿಳಿಸಿವೆ.
ಭೇಟಿ : ಕೇಂದ್ರಗೃಹ ಸಚಿವ ಶಿವರಾಜ್ ಪಾಟೀಲ್ ಸೋಮವಾರ ಜಲಾವೃತಗೊಂಡ ತಮಿಳುನಾಡಿನ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿ ಬಗೆಗೆ ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ಜೊತೆ ಚರ್ಚಿಸಿದರು.
ಡಿಸೆಂಬರ್‌ಗೂ ಭೂಕಂಪಕ್ಕೂ ಇರುವ ನಂಟು ತಿಳಿಯುತ್ತಿಲ್ಲ. ಕಳೆದ ವರ್ಷ ಡಿ.26 ಇರಾಕ್‌ನಲ್ಲಿ ಸಂಭವಿಸಿದ್ದ ಭೂಕಂಪ 26 ಸಾವಿರ ಮಂದಿಗೆ ಮೃತ್ಯು ಕೂಪವಾಯಿತು. ಈಗ ಮತ್ತೆ ಇನ್ನೊಂದು ರೂಪದಲ್ಲಿ ಮತ್ತೊಂದು ಪ್ರದೇಶದಲ್ಲಿ ಪ್ರಕೃತಿ ಮಾತೆ ಮುನಿದಿದ್ದಾಳೆ.
ಮುಖಪುಟ / ವಾಟ್ಸ್ ಹಾಟ್

















Click it and Unblock the Notifications