ಬೆಂಗಳೂರಲ್ಲೀಗ ಅಖಿಲ ಕರ್ನಾಟಕ ಬ್ರಾಹ್ಮಣರ ಸಮ್ಮೇಳನ ಸಂಭ್ರಮ
ಬೆಂಗಳೂರಲ್ಲೀಗ ಅಖಿಲ ಕರ್ನಾಟಕ ಬ್ರಾಹ್ಮಣರ ಸಮ್ಮೇಳನ ಸಂಭ್ರಮ
ಸಮ್ಮೇಳನಾಧ್ಯಕ್ಷರಾಗಿ ಬಿ.ಕೃಷ್ಣಭಟ್, ಇತರೇ ಜನಾಂಗದ ಸ್ವಾಮೀಜಿಗಳಿಗೂ ಆತಿಥ್ಯ.
ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ತ್ರಿದಶಮಾನೋತ್ಸವ ಹಾಗೂ ಸಮ್ಮೇಳನದಲ್ಲಿ ಸುಮಾರು ಎರಡು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾಜ ಸೇವಕ ಬಿ.ಕೃಷ್ಣಭಟ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಶುಕ್ರವಾರ(ಡಿ.24) ಸಂಜೆ 4ಕ್ಕೆ ಸಮ್ಮೇಳನವನ್ನು ಉದ್ಘಾಟಿಸುವರು.
ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಬ್ರಾಹ್ಮಣರು ಎದುರಿಸುತ್ತಿರು ಸವಾಲು, ಸಮಸ್ಯೆ ಹಾಗೂ ಅವುಗಳಿಗೆ ಪರಿಹಾರ ಮತ್ತಿತರ ಸಂಗತಿಗಳು ಸಮ್ಮೇಳನದಲ್ಲಿ ಚರ್ಚಿಸಲ್ಪಡುತ್ತವೆ. ಡಿ.26ರಂದು ನಗರದ ಬಸವನಗುಡಿ ಸೇರಿದಂತೆ ಹಲವು ಕಡೆ ಗಾಯತ್ರಿ ಶೋಭಾಯಾತ್ರೆ ನಡೆಯಲಿದ್ದು, ಸುಮಾರು 3ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಹೊರ ಭಾಗದಿಂದ ಆಗಮಿಸುವ ಅತಿಥಿಗಳಿಗೆ ಸೂಕ್ತ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 400 ಬಾಣಸಿಗರು ಭೋಜನ ತಯಾರಿಕೆಗೆ ಸಜ್ಜಾಗಿದ್ದಾರೆ
ಇದು ಸೌಹಾರ್ದ ಸಮಾವೇಶವೂ ಆಗಿದ್ದು, ರಾಜ್ಯದ ವಿವಿಧ ಮಠಗಳ ಶ್ರೀಗಳನ್ನು ಆಹ್ವಾನಿಸಲಾಗಿದೆ. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿ, ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ, ಮೈಸೂರಿನ ಸ್ವತಂತ್ರ ಪರಕಾಲ ಸ್ವಾಮೀಜಿ, ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ, ಹರಿಹರಮಠದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಮಂತ್ರಾಲಯದ ಶ್ರೀ ಸುಶಮೀಂದ್ರ ತೀರ್ಥ ಸ್ವಾಮೀಜಿ, ಶೃಂಗೇರಿ ಶಾರದ ಪೀಠದ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್ ಮತ್ತಿತರರು ಸಮ್ಮೇಳನದಲ್ಲಿ ಪಾಲ್ಗೊಳ್ಳುವರು..
ಸನ್ಮಾನ : ಸಂಗೀತಗಾರ ಆರ್.ಕೆ. ಶ್ರೀಕಂಠನ್, ಸಂಸ್ಕೃತ ವಿದ್ವಾನ್ ಪ್ರೊ.ಕೆ.ಟಿ.ಪಾಂಡುರಂಗಿ, ಸ್ವಾತಂತ್ರ್ಯಹೋರಾಟಗಾರ ನರಸಿಂಹ ಧಾಬಡೆ, ಬಾಹ್ಯಕಾಶ ವಿಜ್ಞಾನಿ ಯು.ಆರ್.ರಾವ್, ಸಾಹಿತಿ ಎಸ್.ಎಲ್.ಬೈರಪ್ಪ, ರಂಗ ಕಲಾವಿದ ಮಾಸ್ಟರ್ ಹಿರಣ್ಣಯ್ಯ, ಕ್ರಿಕೆಟ್‌ಪಟು ಅನಿಲ್ ಕುಂಬ್ಳೆ ಸೇರಿದಂತೆ ಹದಿನೈದು ಮಂದಿಯನ್ನ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications