ಮೂಡಬಿದಿರೆಯಲ್ಲಿ ‘ಆಳ್ವಾಸ್ ನುಡಿಸಿರಿ’
ಮೂಡಬಿದಿರೆಯಲ್ಲಿ ‘ಆಳ್ವಾಸ್ ನುಡಿಸಿರಿ’
ಸಮ್ಮೇಳನದ ಅಧ್ಯಕ್ಷರಾಗಿ ಬರಗೂರು ರಾಮಚಂದ್ರಪ್ಪ
ಬೆಳ್ಳಿಹಬ್ಬದ ಸಂದರ್ಭದಲ್ಲೋ ಅಥವಾ ಚಿನ್ನದಹಬ್ಬದ ಸಡಗರದಲ್ಲೋ ಅನೇಕ ಕಾರ್ಯಕ್ರಮಗಳು ಏರ್ಪಾಡಾಗುವುದು ಮಾಮೂಲು. ಬೆಳ್ಳಿ-ಚಿನ್ನ-ವಜ್ರ ಮಹೋತ್ಸವಗಳನ್ನು ಆಚರಿಸಿದ ಯಾವುದೇ ಶಿಕ್ಷಣ ಸಂಸ್ಥೆಗೆ ಹೋಗಿ ನೋಡಿ, ಆ ಸಂಭ್ರಮವನ್ನು ಸ್ಥಾಯಿಯಾಗಿಸಲು ಅಲ್ಲೊಂದು ಸ್ಮಾರಕ ಭವನ ಎದ್ದುನಿಂತಿರುತ್ತದೆ. ಇನ್ನು ಉಳಿದಂತೆ ಸ್ಮರಣ ಸಂಚಿಕೆಯಾಂದನ್ನು ತಂದುಬಿಟ್ಟರೆ ಅಲ್ಲಿಗೆ ಆಚರಣೆ ಮುಗಿಯಿತು. ಸ್ಮರಣ ಸಂಚಿಕೆ-ಕಟ್ಟಡದ ಹೆಸರಲ್ಲಿ ಉದಾರ ದೇಣಿಗೆಯೂ ಸಂಗ್ರಹವಾಗುತ್ತದೆನ್ನಿ.
ಇತರ ಶಿಕ್ಷಣ ಸಂಸ್ಥೆಗಳ ಮಾತು ಬಿಡಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಈ ಆಚರಣೆಯನ್ನು ನೋಡಿ. ಶತಮಾನೋತ್ಸವ ಸಂದರ್ಭದಲ್ಲಿ ಅರ್ಥಪೂರ್ಣವಾದೊಂದು ನುಡಿ ಸಿರಿ ಉತ್ಸವವನ್ನು ಆಚರಿಸಲು ಪ್ರತಿಷ್ಠಾನ ಮುಂದಾಗಿದೆ. ಈ ಮೂಲಕ ಅರ್ಥಪೂರ್ಣ ಆಚರಣೆಗಳನ್ನು ನಡೆಸುವ ಸಂಸ್ಥೆಗಳ ಸಾಲಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವೂ ಸೇರಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡ ಕನ್ನಡ ನಾಡು ನುಡಿಯ ರಾಷ್ಟ್ರೀಯು ಸಮ್ಮೇಳನವಾದ ‘ಆಳ್ವಾಸ್ ನುಡಿಸಿರಿ-2004’ ಡಿಸೆಂಬರ್ 17ರ ಶುಕ್ರವಾರ ಆಂಭವಾಗಿದೆ.
ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ, ಚಿಂತಕ , ಸಾಹಿತಿ, ಚಲನಚಿತ್ರ ನಿರ್ದೇಶಕರೂ ಆದ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 17ರಿಂದ 19ರವರೆಗೆ ನುಡಿಸಿರಿ ಸಮ್ಮೇಳನ ನಡೆಯುತ್ತಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶತಮಾನೋತ್ಸವ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಮ್ಮೇಳನವನ್ನು ಇನ್ನು ಮುಂದೆ ಪ್ರತಿವರ್ಷವೂ ಹಮ್ಮಿಕೊಳ್ಳಲು ಪ್ರತಿಷ್ಠಾನ ಉದ್ದೇಶಿಸಿದೆ. ಒಳ್ಳೆಯ ಕೆಲಸಗಳು ನಿರಂತರವಾಗಿರಲಿ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ।। ಚಂದ್ರಶೇಖರ ಪಾಟೀಲ ಮೂಲಕ ಉದ್ಘಾಟನೆಗೊಳ್ಳುವ ಸಮ್ಮೇಳನದ ಸಮಾರೋಪ ಭಾಷಣವನ್ನು ಹಿರಿಯ ಸಾಹಿತಿ, ಪ್ರಾಧ್ಯಾಪಕ ಡಾ।। ಹಂ. ಪ. ನಾಗರಾಜಯ್ಯ ಮಾಡಲಿದ್ದಾರೆ.
ಸಾಮಾನ್ಯವಾಗಿ ಸಮ್ಮೇಳನಗಳೆಂದರೆ ಅಧ್ಯಕ್ಷರು ಭಾಷಣ ಮಾಡುವುದು, ಆ ಭಾಷಣವನ್ನು ಪುಸ್ತಕವಾಗಿ ಮುದ್ರಿಸಿ ಹಂಚುವುದು, ಇನ್ನೊಂದು ಭಾಷಣಗಳ ನಂತರ ಉಂಡು ಮನೆ ಸೇರುವುದು ರೂಢಿ. ಆದರೆ ನುಡಿಸಿರಿ ಸಮ್ಮೇಳನದ ಪರಿಯೇ ಬೇರೆ. ಈ ಸಮ್ಮೇಳನದಲ್ಲಿ ಅಧ್ಯಕ್ಷರ ಭಾಷಣಕ್ಕೆ ವಿಶೇಷ ಅವಧಿಯನ್ನೇ ನಿಗದಿಪಡಿಸಲಾಗಿದೆ. ಅಧ್ಯಕ್ಷರ ಭಾಷಣ ಏಕಮುಖವಾಗಬಾರದು ಎನ್ನುವ ಉದ್ದೇಶದಿಂದ ಅಧ್ಯಕ್ಷರ ಭಾಷಣಾನಂತರ ಮೂವರು ವಿದ್ವಾಂಸರು ಅಧ್ಯಕ್ಷರು ಮಂಡಿಸಿದ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ನಂತರ ಸಾರ್ವಜನಿಕ ಚರ್ಚೆಯೂ ನಡೆಯಲಿದೆ. ಹೀಗಾಗಿ ಬರಗೂರು ಬೆಂಕಿಯುಗುಳಿ ಸುಮ್ಮನಾಗುವಂತಿಲ್ಲ . ಉಗುಳಿದ ಬೆಂಕಿಯನ್ನು ಅರಗಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಸಮ್ಮೇಳನದಲ್ಲಿ ಅವರಿಗೆ ಎದುರಾಗಲಿದೆ.
ಇದು ಕೇವಲ ಬೌದ್ಧಿಕ ಕಸರತ್ತಿನ ಚರ್ಚೆಗಳ ಅಂಗಳ ಮಾತ್ರವಲ್ಲ , ಕಲೆ-ಸಂಸ್ಕೃತಿಯ ವೇದಿಕೆಯೂ ಹೌದು. ಜನಪದ ನೃತ್ಯ, ಮೂಕಜ್ಜಿ ಕನಸುಗಳು ನಾಟಕ, ಕನ್ನಡ ಕವನಗಳ ನೃತ್ಯ ರೂಪಕ, ಸುಗಮ ಸಂಗೀತ ಸೇರಿದಂತೆ ಅನೇಕ ಕಾರ್ಯಕ್ರಗಳು ಸಮ್ಮೇಳನದ ಕಾರ್ಯಕ್ರಮ ಪಟ್ಟಿಯಲ್ಲಿವೆ. ಊಟ ಉಪಚಾರದ ವ್ಯವಸ್ಥೆಯೂ ಜೋರಾಗಿದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪುಗಳಿನ್ನೂ ಜೈನಕಾಶಿ ಮೂಡಬಿದಿರಯಲ್ಲಿ ಉಸಿರಾಡುತ್ತಿರುವ ಹೊತ್ತಿನಲ್ಲೇ ಆಳ್ವಾಸ್ ನುಡಿಸಿರಿ ಉತ್ಸವ ನಡೆಯುತ್ತಿದೆ. ದಕ್ಷಿಣ ಕನ್ನಡಿಗರು ಆತಿಥ್ಯಕ್ಕೆ ಎತ್ತಿದ ಕೈ. ಈ ಮಾತು ನುಡಿಸಿರಿ ಉತ್ಸವದಲ್ಲೂ ಎದ್ದು ಕಾಣುತ್ತಿದೆ.
ನುಡಿಸಿರಿ ಸಮ್ಮೇಳನವು ಶ್ರೀಮತಿ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ನಡೆಯುತ್ತಿದೆ. ಸಮ್ಮೇಳನದ ಕಚೇರಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ತೆರೆಯಲಾಗಿದ್ದು, ವಿವರಗಳಿಗಾಗಿ ದೂರವಾಣಿ ಸಂಖ್ಯೆ : 08258-238104/05/06/07/08/09/10/11 ಹಾಗೂ ಫ್ಯಾಕ್ಸ್ : 08258-236731 ಸಂಪರ್ಕಿಸಬಹುದು.
ಅಂದಹಾಗೆ, ‘ಕನ್ನಡ ಮನಸ್ಸು: ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸವಾಲುಗಳು’ ಎನ್ನುವ ವಿಚಾರದಲ್ಲಿ ಈ ಬಾರಿಯ ಆಳ್ವಾಸ್ ಸಮ್ಮೇಳನ ನಡೆಯುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications