ಮರಳುವ ಭರವಸೆಯಾಂದಿಗೆ ಕಾಂಗ್ರೆಸ್‌ಗೆ ಕೃಷ್ಣತಾತ್ಕಾಲಿಕ ವಿದಾಯ
ಮರಳುವ ಭರವಸೆಯಾಂದಿಗೆ ಕಾಂಗ್ರೆಸ್‌ಗೆ ಕೃಷ್ಣತಾತ್ಕಾಲಿಕ ವಿದಾಯ
ಮುಂಬಯಿ ರಾಜಭವನವ ಪ್ರಜಾಭವನವಾಗಿಸುವೆ...
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡಿದ ಚಾಮರಾಜಪೇಟೆ ಜನತೆಯ ಒಪ್ಪಿಗೆ ಪಡೆದು ತೆರಳುತ್ತಿರುವುದಾಗಿ ಹೇಳಿದ ಕೃಷ್ಣ - ಸಕ್ರಿಯ ರಾಜಕಾರಣದಿಂದ ತಾವು ದೂರವುಳಿಯುವ ಕುರಿತು ಮಾರ್ಮಿಕವಾಗಿ ಉತ್ತರಿಸಿದರು. ರಾಜ್ಯಪಾಲ ಹುದ್ದೆಯ ನಂತರ ರಾಜ್ಯಕ್ಕೆ ಹಿಂತಿರುಗುವುದಾಗಿ ಹೇಳಿದ ಕೃಷ್ಣ , ಜಲಕಂಠೇಶ್ವರನ ಕೃಪಾಕಟಾಕ್ಷ, ಮಾಜಿ ಶಾಸಕ ಆರ್.ವಿ.ದೇವರಾಜ್ ಹಾಗೂ ಕ್ಷೇತ್ರದ ಮತದಾರರ ಸಹಕಾರದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಇದಕ್ಕಾಗಿ ಎಲ್ಲರಿಗೂ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಚಾಮರಾಜಪೇಟೆಯ ಜನತೆ ಮುಂಬಯಿಗೆ ಬಂದಾಗ ರಾಜಭವನಕ್ಕೆ ಬನ್ನಿ ಎಂದು ಆಮಂತ್ರಿಸಿದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜಭವನವನ್ನು ಪ್ರಜಾಭವನವನ್ನಾಗಿ ಮಾರ್ಪಾಡು ಮಾಡುತ್ತೇನೆ ಎಂದು ಅಭಿಮಾನಿಗಳ ಚಪ್ಪಾಳೆಯ ನಡುವೆ ಹೇಳಿದರು.
ಬೆಂಬಲಿಗರ ವಿರೋಧ : ರಾಜ್ಯ ರಾಜಕಾರಣದಿಂದ ದೂರವುಳಿದು ಮಹಾರಾಷ್ಟ್ರ ರಾಜ್ಯಪಾಲರಾಗಿ ತೆರಳುತ್ತಿರುವ ಕೃಷ್ಣ ಅವರ ನಿರ್ಧಾರವನ್ನು ಅವರ ಕಟ್ಟಾ ಬೆಂಬಲಿಗರು ವಿರೋಧಿಸಿದರು. ಕೃಷ್ಣ ಅವರನ್ನು ಬೇಕೆಂದೇ ರಾಜ್ಯ ಕಾಜಕಾರಣದಿಂದ ದೂರವಿಡಲಾಗುತ್ತಿದೆ ಎನ್ನುವ ಶಂಕೆ ಅನೇಕರದು. ಬೆಂಬಲಿಗರ ಒತ್ತಾಯಕ್ಕೆ ಸ್ಪಂದಿಸಿದ ಕೃಷ್ಣ , ರಾಜ್ಯಪಾಲ ಹುದ್ದೆ ಶಾಶ್ವತವೇನಲ್ಲ . ಎಲ್ಲಿಯೇ ಇದ್ದರೂ ರಾಜ್ಯವನ್ನು ಮರೆಯುವುದಿಲ್ಲ ಎಂದರು. ಅನೇಕ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಣೆಯ ನಂತರ ಸಕ್ರಿಯ ರಾಜಕಾರಣಕ್ಕೆ ಮರಳಿದ ಉದಾಹರಣೆಗಳಿವೆ ಎಂದು ಕೃಷ್ಣ ಹೇಳಿದರು.
ರಾಜ್ಯಪಾಲ ಹುದ್ದೆಗೆ ತೆರಳುತ್ತಿರುವ ಸಂದರ್ಭದಲ್ಲೂ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ.ದೇವೇಗೌಡರ ಮೇಲೆ ಟೀಕಾಪ್ರಹಾರ ಮಾಡಿದ ಕೃಷ್ಣ , ದೇವೇಗೌಡರು ಕಾಂಗ್ರೆಸ್ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಆಪಾದಿಸಿದರು. ರೈತರ ಪರ ದೇವೇಗೌಡರ ಕಾಳಜಿ ಬೂಟಾಟಿಕೆಯದು ಎಂದು ಕೃಷ್ಣ ಗೇಲಿ ಮಾಡಿದರು.
ಮುಂಬಯಿಯಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದ ಕೃಷ್ಣ , ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ಏಡ್ಸ್ ಜಾಗೃತಿ ಆಂದೋಲನ ರೂಪಿಸುವುದಾಗಿ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications