ಕಂಚಿಶ್ರೀ ಬಂಧನ: ಭಾರತ್‌ಬಂದ್ ಕರೆಗೆ ರಾಜ್ಯದಿ ನೀರಸ ಪ್ರತಿಕ್ರಿಯೆ
ಕಂಚಿಶ್ರೀ ಬಂಧನ: ಭಾರತ್‌ಬಂದ್ ಕರೆಗೆ ರಾಜ್ಯದಿ ನೀರಸ ಪ್ರತಿಕ್ರಿಯೆ
ಹಿಂದುಗಳಿಗೆ ಅವಮಾನ ಎನ್ನುವ ಬಿಜೆಪಿ ಬೊಬ್ಬೆ ನಿಲ್ಲಲಿ -ಪೂಜಾರಿ
ಗುಲ್ಪರ್ಗ, ಬೀದರ್, ದಾವಣಗೆರೆ, ಧಾರವಾಡ, ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರುನಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲ್ಲು ತೂರಾಟದ ಪ್ರಕರಣಗಳು ಹುಬ್ಬಳ್ಳಿ, ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ ಮತ್ತು ಹೊಸಪೇಟೆಯಿಂದ ವರದಿಯಾಗಿದೆ. ಈ ಭಾಗಗಳಲ್ಲಿ ಬಂದ್ ಪರಿಣಾಮ ಇಂದು ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಬಸ್ಸು ಸಂಚಾರ ವಿರಳವಾಗಿತ್ತು. ಉಡುಪಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು.
ರಾಜಧಾನಿ ನಗರ ಬೆಂಗಳೂರುನಲ್ಲಿ ಬಂದ್ ಪರಿಣಾಮ ಬೀರಿಲ್ಲ. ಜನಜೀವನ ಎಂದಿನಂತೆಯೇ ಮುಂದುವರೆದಿದೆ. ಬಸ್, ಆಟೋರಿಕ್ಷಾ ಮತ್ತಿತರ ವಾಹನಗಳ ಸಂಚಾರ ಎಂದಿನಂತಿದೆ.
ತಮಿಳುನಾಡಿನಲ್ಲೂ ಅದೇ ಕತೆ : ಕಂಚಿ ಶ್ರೀಗಳ ಬಿಡುಗಡೆಗೆ ಒತ್ತಾಯಿಸಿ ವಿಹೆಚ್‌ಪಿ ಕರೆ ನೀಡಿದ್ದ ಭಾರತ್ ಬಂದ್‌ಗೆ ತಮಿಳುನಾಡಿನಲ್ಲಿ ಭಾಗಶಃ ಪ್ರತಿಕ್ರಿಯೆ ಕಂಡು ಬಂದಿದೆ. ಕನ್ಯಾಕುಮಾರಿಯಲ್ಲಿ ಬಸ್‌ಗಳ ಮೇಲೆ ಕಲ್ಲುತೂರಿದ ಘಟನೆ ಸಂಭವಿಸಿದೆ.
ಪೂಜಾರಿ ಟೀಕೆ : ಬಿಜೆಪಿ ಮತ್ತು ಸಂಘ ಪರಿವಾರ ಕಾನೂನು ಪರಿಪಾಲನೆಗೆ ಅಡ್ಡಿಪಡಿಸುತ್ತಿದೆ. ಅಲ್ಲದೇ ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ. ಶ್ರೀಗಳ ಹೆಸರು ಕೊಲೆ ಆರೋಪಿಗಳ ಪಟ್ಟಿಯಲ್ಲಿದೆ, ಅದರ ವಿಚಾರಣೆಗೆ ಸಹಕರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಹೇಳಿದರು.
ಸೋಮವಾರ(ನ.22) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಶ್ರೀಗಳ ಬಂಧನದ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚುವ ಅಗತ್ಯವಿಲ್ಲ. ಈ ಪ್ರಕರಣದಿಂದ ಬಡ ಬ್ರಾಹ್ಮಣರ ಮೇಲೆ ದೌರ್ಜನ್ಯ ನಡೆದಿದೆ. ಹಿಂದು ಜನಾಂಗಕ್ಕೆ ಅವಮಾನವಾಗಿದೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು.
ಬಿಜೆಪಿ ಹಿಂದು ಸೆಂಟಿಮೆಂಟ್ ಸೃಷ್ಟಿಸುತ್ತಿರುವುದು ಸೂಕ್ತವಲ್ಲ. ಶ್ರೀಗಳ ಬಗೆಗೆ ಎಲ್ಲರಿಗೂ ಗೌರವವಿದೆ. ಆದರೆ ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು. ಬಿಜೆಪಿ ಪ್ರತಿಭಟನೆ ಅರ್ಥಹೀನ ಎಂದು ಪೂಜಾರಿ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications