ಕಂಚಿಯ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿಯ ಬಂಧನ
ಕಂಚಿಯ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿಯ ಬಂಧನ
ಆಂಧ್ರದಲ್ಲಿ ಬಂಧನ, ನೆಲ್ಲೂರು ಜೈಲಿಗೆ ರವಾನೆ
ಆಂಧ್ರಪ್ರದೇಶದ ಮೆಹಬೂಬ್‌ನಗರದಲ್ಲಿ 60 ವರ್ಷದ ಶಂಕರಾಚಾರ್ಯರನ್ನು ನ.11ರ ಗುರುವಾರ ರಾತ್ರಿ ತಮಿಳುನಾಡಿನ ವಿಶೇಷ ಪೊಲೀಸ್ ತಂಡ ಬಂಧಿಸಿತು. ಬಂಧಿತ ಸ್ವಾಮೀಜಿಯನ್ನು ಚೆನ್ನೈಗೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು ಎಂದು ತಮಿಳುನಾಡು ಡಿಜಿಪಿ ಐ.ಕೆ. ಗೋವಿಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಂಕರಾಚಾರ್ಯರನ್ನು 15 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು , ಅವರನ್ನು ನೆಲ್ಲೂರು ಕಾರಾಗೃಹಕ್ಕೆ ರವಾನಿಸಲಾಗಿದೆ.
ದೀಪಾವಳಿ ಸಂದರ್ಭದಲ್ಲಿ ಶಂಕರಾಚಾರ್ಯರ ಬಂಧನ ಸಿನಿಮೀಯ ರೀತಿಯಲ್ಲಿ ನಡೆದಿದೆ. ಶಂಕರಾಚಾರ್ಯರು ಬೆಂಗಳೂರಿನಲ್ಲಿದ್ದಾರೆಂದು ಭಾವಿಸಿದ ಪೊಲೀಸ್ ಕಮಾಂಡೊಗಳ ತಂಡ ಮೊದಲಿಗೆ ಬೆಂಗಳೂರಿಗೆ ಧಾವಿಸಿ, ಆನಂತರ ಹೈದರಾಬಾದ್ ಮೂಲಕ ಮೆಹಬೂಬ್‌ನಗರಕ್ಕೆ ತೆರಳಿತು. ಬಂಧನದ ಸಮಯದಲ್ಲಿ ಶಂಕರಾಚಾರ್ಯರು ತ್ರಿಕಾಲ ಪೂಜೆಯಲ್ಲಿ ತೊಡಗಿದ್ದರು.
ಕಂಚೀಪುರಂನ ವರದರಾಜ ಪೆರುಮಾಳ್ ದೇಗುಲದ ಮೇನೇಜರ್ ಶಂಕರರಾಮನ್‌ನ ಕೊಲೆ (ಸೆ.3, 2004) ಪ್ರಕರಣದಲ್ಲಿ ಶಂಕರಾಚಾರ್ಯರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಐವರ ಸಾಕ್ಷ್ಯಗಳ ಆಧಾರದ ಮೇಲೆ ಈ ಬಂಧನ ನಡೆದಿದೆ.
ಹಿಂದೊಮ್ಮೆ ಅಯೋಧ್ಯೆ ವಿಷಯದಲ್ಲಿ ಮಧ್ಯಸ್ಥಿಕೆಯ ಪಾತ್ರ ವಹಿಸಿದ್ದ ಕಂಚಿ ಶಂಕರಾಚಾರ್ಯರು ರಾಜಕೀಯ ಸಂಬಂಧಗಳನ್ನೂ ಹೊಂದಿದ್ದರು. 10 ವರ್ಷಗಳ ಹಿಂದೆ ಮಠದಿಂದ ಏಕಾಏಕಿ ಕಣ್ಮರೆಯಾಗಿದ್ದ ಸ್ವಾಮೀಜಿ, ಆನಂತರ ಕರ್ನಾಟಕದ ಕೊಡಗಿನಲ್ಲಿ ಕಾಣಿಸಿಕೊಂಡಿದ್ದರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications