ಹೆಬ್ಬುಲಿಗೆ ಎದುರಾಗಿ ಪಾರಾಗಿ ಬಂದ ‘ವೀರ’ಕುಮಾರ ಹಾಗೂ ಜೂಲಿ

ಹೆಬ್ಬುಲಿಗೆ ಎದುರಾಗಿ ಪಾರಾಗಿ ಬಂದ ‘ವೀರ’ಕುಮಾರ ಹಾಗೂ ಜೂಲಿ
ಸಕಲೇಶಪುರ ಸಮೀಪದಲ್ಲೊಂದು ಪರಮೇಶಿ ಪರಾಕ್ರಮ ಪ್ರಸಂಗ

ಸಕಲೇಶಪುರ : ಹುಲಿ ಎದುರಿಗೆ ಬಂದರೆ ಮಾಡುವುದೇನು ? ಕಾಲಿಗೆ ಬುದ್ಧಿ ಹೇಳಿ ಕಂಬಿ ಕೀಳುವುದು ತಾನೇ! ಉಹುಂ, ಇಲ್ಲಿನದು ಕಾಲಿಗೆ ಬುದ್ಧಿ ಹೇಳಿದ ಕಥೆಯಲ್ಲ ; ಕಾಲೂರಿ ಹುಲಿಗೆ ಮುಖಾಮುಖಿಯಾದ ಪರಾಕ್ರಮಗಾಥೆ. ಯಾರೀ ಹೊಯ್ಸಳ ಎಂದಿರಾ? ಅವರ ಹೆಸರು, ಪರಮೇಶ್‌!

ಹುಲಿಯನ್ನು ಹೊಯ್ದ ಸಳನಿಗಂದು ಕಬ್ಬಿಣದ ಸರಳೊಂದು ಆಯುಧವಾಗಿ ಪರಿಣಮಿಸಿದರೆ, ಪರಮೇಶ್ವರಪ್ಪನವರಿಗೆ ಬೆಂಬಲವಾಗಿ ನಿಂತದ್ದು ಸಾಕುನಾಯಿ. ಇತ್ತೀಚೆಗಷ್ಟೇ, ಹುಲಿಗೆ ಮೈಕೊಟ್ಟೂ ಜೀವವುಳಿಸಿಕೊಂಡು ಬಂದವರ ಆ ಕಥೆ ಹೀಗಿದೆ, ಕೇಳಿ :

ಕಾಫಿ ತೋಟದಲ್ಲಿ ಕೆಲಸಮಾಡುವ ಕುಮಾರಹಳ್ಳಿಯ ಪರಮೇಶ್‌ಗೆ ಅಂದು ಗಂಡಾಂತರ ಕಾದಿತ್ತು. ಬೆಳಗ್ಗೆ ಯಾರ ಮುಖನೋಡಿದ್ದರೋ ಏನೋ, ರಸ್ತೆಯಲ್ಲಿ ಗುಡ್‌ಮಾರ್ನಿಂಗ್‌ ಎನ್ನುತ್ತಾ ದರ್ಶನ ಕೊಟ್ಟಿದ್ದು ಹುಲಿರಾಯ. ಇದು ಅಂತಿಂಥ ಹುಲಿಯಲ್ಲ. ಹುಲ್ಲು ತಿನ್ನುವ ಪೈಕಿಯಂತೂ ಅಲ್ಲವೇ ಅಲ್ಲ . ಅದು ಬಿಸಿರಕ್ತದ ರುಚಿ ಕಂಡ ಹುಲಿ. ಕಳೆದ ಕೆಲವು ದಿನಗಳ ಹಿಂದಷ್ಟೇ ಪರಮೇಶ್‌ ಮತ್ತು ಆತನ ಗೆಳೆಯ ಮಂಜುನಾಥ್‌ರ ಎರಡು ಹಸುಗಳನ್ನು ಹುಲಿರಾಯ ಮುಗಿಸಿಬಿಟ್ಟಿದ್ದ. ಈ ಭಾಗದಲ್ಲಿ ಹುಲಿ ಕಾಟ ಹೆಚ್ಚು ಮಾತ್ರವಲ್ಲ, ತುಂಬಾನೇ ಹೆಚ್ಚು. ಕಳೆದ ಎರಡು ವರ್ಷಗಳಿಂದ ಅಕ್ಕಪಕ್ಕದ ಹಳ್ಳಿಯ ಸುಮಾರು 20 ಹಸು ಹಾಗೂ ನಾಯಿಗಳು ಹುಲಿ ಬಾಯಿಗೆ ಬಲಿಯಾಗಿವೆ.

ಅಂದು ಬೆಳಗ್ಗೆ ಹುಲಿ ಎದುರಾದಾಗ ಪರಮೇಶ್‌ ಸಹಜವಾಗಿಯೇ ಕಂಗಾಲಾಗಿದ್ದ. ಅನಿರೀಕ್ಷಿತ ದಾಳಿಯಿಂದ ಏನು ಮಾಡಲು ತೋಚಲಿಲ್ಲ. ಆತನ ಮೇಲೆ ಎಗರಿದ ಹುಲಿರಾಯ ಮೈಯೆಲ್ಲಾ ಪರಚಿ ಗಾಯಗೊಳಿಸಿತು. ಕುತ್ತಿಗೆಯನ್ನು ಕಚ್ಚಲು ಬಾಯಿ ಹಾಕಿತು. ಧೈರ್ಯ ಕೂಡಿಕೊಂಡದ್ದೇ ಜೀವಕ್ಕೆ ಸಂಚಕಾರ ಒದಗಿದಾಗ. ತುಂಬಾ ಧೈರ್ಯದಿಂದ ಇದ್ದಬದ್ದ ಶಕ್ತಿಯನ್ನೆಲ್ಲಾ ಕೂಡಿಸಿಕೊಂಡು, ಹುಲಿಗೆ ಕಾಲಿನಿಂದ ಬಲವಾಗಿ ಕಿಕ್‌ ಮಾಡಿದ. ಹುಲಿರಾಯ ಆಯತಪ್ಪಿ ಕೆಳಕ್ಕೆ ಬಿದ್ದ.

ಆಹೊತ್ತಿಗೆ ತನ್ನ ಒಡೆಯನ ಹುಡುಕಿಕೊಂಡು ಅತ್ತಲೇ ಬಂದ ಪರಮೇಶ್‌ರ ಪ್ರೀತಿಯ ಸಾಕು ನಾಯಿ ಜೂಲಿಗೆ ಅಪಾಯ ಅರ್ಥವಾಗಿತ್ತು. ನಾಯಿಯೆಂದರೇನು ತಮಾಷಿಯಾ? ಅದು ಗ್ರಾಮಸಿಂಹ ತಾನೆ? ಆ ಜೋರಿನಿಂದಲೇ ಪರಮೇಶ್‌ರ ನಾಯಿ ಜೂಲಿ ಹುಲಿಯ ಕುತ್ತಿಗೆಗೆ ಬಾಯಿ ಹಾಕಿತು. ಪರಮೇಶ್‌ ಮೇಲಿನ ಹುಲಿಯ ಗಮನ ನಾಯಿಯತ್ತ ತಿರುಗಿದ್ದೇ ಆಗ. ಈ ಸಮಯವನ್ನು ಉಪಯೋಗಿಸಿಕೊಂಡ ಪರಮೇಶ್‌, ಪಕ್ಕದಲ್ಲಿದ್ದ ದೊಣ್ಣೆ ಕೈಗೆತ್ತಿಕೊಂಡು ಒಂದೇ ಸಮನೆ ಹುಲಿಗೆ ಬಾರಿಸತೊಡಗಿದ. ಹುಲಿಗೆ ಗಾಬರಿ, ಆ ಗಾಬರಿಯಲ್ಲೇ ಪರಾರಿ. ಪರಮೇಶ್‌ ಬಚಾವಾಗಿದ್ದರು, ನಾಯಿ ಜೂಲಿ ಜೊತೆಯಲ್ಲೇ ಕ್ಷೇಮವಾಗಿತ್ತು .

ಪರಮೇಶ್‌ರ ತಲೆ, ಎದೆ, ಕೈಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಅವರ ಬಳಿ ಹೋಗಿ ಹುಲಿ ಎನ್ನಿ ; ಕೈಕಾಲುಗಳಲ್ಲೊಂದು ಸೆಳಕು ಕಾಣಿಸಿಕೊಳ್ಳುತ್ತದೆ. ಅವರ ಕಣ್ಣುಗಳು ಥೇಟ್‌ ಹುಲಿಯ ಕಣ್ಣುಗಳಂತೆ ಚಂಚಲಗೊಳ್ಳುತ್ತವೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+