ಚಂಪಾ
ಚಂಪಾ Vs ನಲ್ಲೂರು: ಕನ್ನಡಸಾಹಿತ್ಯಪರಿಷತ್ ಅಧ್ಯಕ್ಷಪೀಠ ಯಾರಿಗೆ?
ಓಟು ಸಂಘಟಕರಿಗೊ ಸಾಹಿತಿಗೊ.... ಅ.31ರಂದು ಮತದಾನ
ಕಸಾಪ ಅಧ್ಯಕ್ಷ ಸ್ಥಾನವು ಯಾರಿಗೆ ಸೂಕ್ತ? ಅದು ಸಂಘಟಕರಿಗೆ/ಸಾಹಿತಿಗಳಿಗೆ ದಕ್ಕ ಬೇಕೇ ಎಂಬ ಪ್ರಶ್ನೆ ಕಳೆದ ಸಲದಂತೆ ಈ ಬಾರಿಯೂ ಮತದಾರರನ್ನು ಕಾಡುತ್ತಿದೆ. ಮತದಾರ ಪ್ರಭು ಕಳೆದ ಚುನಾವಣೆಯಲ್ಲಿ ಈ ಪ್ರಶ್ನೆಗೆ ಸಂಘಟಕರ ಪರವಾಗಿ ಉತ್ತರಿಸಿದ್ದ. ಈ ಬಾರಿಯ ಉತ್ತರ ?
ಈ ಸಲದ ಚುನಾವಣೆಯಲ್ಲಿ ಸಾಹಿತಿ ಚಂದ್ರಶೇಖರ್ ಪಾಟೀಲ(ಚಂಪಾ) ಮತ್ತು ಸಂಘಟನಾ ಚತುರ ಡಾ. ನಲ್ಲೂರು ಪ್ರಸಾದ್ ನಡುವೆ ಮೇಲ್ನೋಟಕ್ಕೆ ತೀವ್ರ ಸ್ಪರ್ಧೆ ಕಂಡುಬಂದಿದೆ. ಕಳೆದ ಚುನಾವಣೆಯಲ್ಲಿ ಹರಿಕೃಷ್ಣ ಪುನರೂರು ವಿರುದ್ಧ ಸೋತಿದ್ದ ಚಂಪಾ ಸುತ್ತ ಈಗ ಅನುಕಂಪದ ಅಲೆ ನಿರ್ಮಾಣಗೊಂಡಿದೆ.
ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ನಡುವಿನ ಸಮರವೆಂಬಂತೆ, ಉತ್ತರ ಕರ್ನಾಟಕವನ್ನು ಚಂಪಾ ಮತ್ತು ದಕ್ಷಿಣ ಕರ್ನಾಟಕವನ್ನು ನಲ್ಲೂರು ಪ್ರಸಾದ್ ಪ್ರತಿನಿಧಿಸಿದ್ದಾರೆ. ಆದರೆ ಪ್ರಾದೇಶಿಕ ಗಡಿಯನ್ನು ದಾಟಿ ಬೆಂಬಲ ಪಡೆಯುವಲ್ಲಿ ಇಬ್ಬರೂ ಸಫಲರಾಗಿದ್ದಾರೆ. ಬೆಂಗಳೂರು, ಹಾಸನ, ಮಂಡ್ಯ, ಮೈಸೂರು, ದಕ್ಷಿಣ ಕರ್ನಾಟಕದಲ್ಲಿ ನಲ್ಲೂರು ಪ್ರಸಾದ್ ಸಂಪರ್ಕಜಾಲ ಹೊಂದಿದ್ದಾರೆ.
ಹೈದರಾಬಾದ್ ಕರ್ನಾಟಕ, ಮುಂಬೈ, ಉತ್ತರ ಕರ್ನಾಟಕದಲ್ಲಿ ಚಂಪಾ ಅಲೆ ಗಟ್ಟಿಯಾಗಿದೆ. ಚಂಪಾ ತವರು ನೆಲ ಧಾರವಾಡ ನಲ್ಲೂರು ಪ್ರಸಾದ್‌ಗೆ ವಾಲಿರುವುದು ವಿಚಿತ್ರವಾಗಿದೆ. ಡಾ.ಪಾಟೀಲ ಪುಟ್ಟಪ್ಪ ನಲ್ಲೂರರಿಗೆ ಬಹಿರಂಗ ಬೆಂಬಲ ಪ್ರಕಟಿಸಿದ್ದಾರೆ.
ಚಂಪಾ ಮೇಲಿನ ಸಿಟ್ಟಿನಿಂದಾಗಿ ಪಾಟೀಲ್‌ಪುಟ್ಟಪ್ಪ ನಲ್ಲೂರು ಪ್ರಸಾದ್‌ರನ್ನು ಬೆಂಬಲಿಸಿದ್ದರೆ, ಕ.ಸಾ.ಪ. ಗೌರವ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಡಾ.ಪುಂಡಲೀಕ ಹಾಲಂಬಿ ಚಂಪಾ ಪರ ನಿಂತಿದ್ದಾರೆ.
ಜಾನಪದ ವಿದ್ವಾಂಸ ಸೋಮಶೇಖರ ಇಮ್ರಾಪುರ ಅವರ ಲೇಖನ ಕೃತಿಚೌರ್ಯ ಮಾಡಿದ್ದರೆಂಬ ಆರೋಪ ನಲ್ಲೂರರ ಬಗ್ಗೆ ಈ ಮುನ್ನ ಕೇಳಿ ಬಂದಿತ್ತು. ಚಂಪಾ ಅವರದು ಬೇರೆಯೇ ಕಥೆ. ಈ ಬಂಡಾಯಗಾರ ಮಹಾನ್ ಜಗಳಗಂಟಿ. ಈ ಜಗಳಗಂಟಿತನವೇ ಅವರಿಗೆ ಪ್ರತಿಕೂಲವಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ . ಯು.ಆರ್.ಅನಂತಮೂರ್ತಿ, ಗೊ.ರು.ಚನ್ನಬಸಪ್ಪ , ಪಿ.ವಿ.ನಾರಾಯಣ, ನಾಗತಿಹಳ್ಳಿ ಚಂದ್ರಶೇಖರ ಮುಂತಾದವರು ನಲ್ಲೂರು ಪರವಿದ್ದಾರೆ ಎನ್ನುವುದಕ್ಕಿಂತ ಚಂಪಾ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸೂಕ್ತ.
ಚಂಪಾ ತಮ್ಮ ಸಂಕ್ರಮಣ ಮೂಲಕ ರಾಜ್ಯಾದ್ಯಂತ ಸಾಹಿತ್ಯವಲಯವನ್ನು ರೂಪಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಘರ್ಜಿಸಿದ್ದ ಚಂಪಾ, ಸಾಹಿತ್ಯ ಮತ್ತು ಸಂಘಟನೆ ಎರಡರಲ್ಲೂ ಎತ್ತಿದ ಕೈ. ಅಂತೆಯೇ ರಾಜ್ಯ ಕ.ಸಾ.ಪ. ಗೌರವ ಕಾರ್ಯದರ್ಶಿಯಾಗಿ ಅನುಭವ ಹೊಂದಿರುವ ನಲ್ಲೂರು ಪ್ರಸಾದ್ ಶ್ರೇಷ್ಠ ಸಂಘಟಕರೆನ್ನುವುದರಲ್ಲಿ ಎರಡು ಮಾತಿಲ್ಲ.
ಗುಲ್ಪರ್ಗಾದ ಲಕ್ಷ್ಮಣ ರಾವ್ ಗೋಗಿ, ಲೇಖಕ ಅಜ್ಜಂಪುರ ಸೂರಿ, ಪ್ರೊ. ಶಂಕರಯ್ಯ, ಬಿ.ನಾರಾಯಣಮ್ಮ, ಹರಿಹರಪ್ರಿಯ, ಪ್ರೊ. ನಿ.ಗಿರೀಗೌಡ, ಹಲ್ಲೇಕೆರೆ ಶಂಕರ್ ಸಹಾ ಕಣದಲ್ಲಿದ್ದಾರೆ. ಸುಮಾರು 40 ಸಾವಿರಕ್ಕೂ ಅಧಿಕ ಮತದಾರರನ್ನು ಪರಿಷತ್ತು ಹೊಂದಿದೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯಾ? ಖಾತ್ರಿ ಪಡಿಸಿಕೊಳ್ಳಿ, ಮತದಾನ ನೆರವೇರಲಿ!
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications