ತಂಪುಹವೆ ನಡುವೆ ಗರಿಬಿಚ್ಚಿದ ದಸರೆ ಸಂಭ್ರಮ;‘ಧರ್ಮ’ ಬದ್ಧ ಎಚ್ಚೆನ್
ತಂಪುಹವೆ ನಡುವೆ ಗರಿಬಿಚ್ಚಿದ ದಸರೆ ಸಂಭ್ರಮ;‘ಧರ್ಮ’ ಬದ್ಧ ಎಚ್ಚೆನ್
ವಿಚಾರವಾದಿ ಮೂಲಕ ಉದ್ಘಾಟನೆಗೊಳ್ಳುವ ಮೂಲಕ ದಸರೆಗೆ ಹೊಸ ಆಯಾಮ
ಅ.15ರ ಶುಕ್ರವಾರದಿಂದ ನವರಾತ್ರಿ ಪ್ರಾರಂಭವಾಗಿದ್ದು , ಮೈಸೂರಿನ ಚಾಮುಂಡಿ ಬೆಟ್ಟದ ಒಡತಿ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಡಾ. ನರಸಿಂಹಯ್ಯ ದಸರೆಗೆ ಚಾಲನೆ ನೀಡಿದರು. ಪುಷ್ಪವೃಷ್ಟಿಯಂತೆ ಆಗಾಗ ಸುರಿಯುತ್ತಿದ್ದ ತುಂತುರು, ತಂಪುಹವೆ ವಾತಾವರಣದಲ್ಲಿ ಒಂಬತ್ತು ದಿನಗಳ ದಸರೆ ಸಂಭ್ರಮ ಆರಂಭವಾಯಿತು.
ಇದೊಂದು ಸಾಂಸ್ಕೃತಿಕ ಉತ್ಸವ. ಧರ್ಮವನ್ನು ಬೇಡ ಎನ್ನುವುದು ಅವಾಸ್ತವವಾದುದು. ಸಂಸ್ಕೃತಿ ಮತ್ತು ಧರ್ಮದೊಂದಿಗೆ ನಮ್ಮ ಜನ ಜೀವನ ನಡೆಸುತ್ತಿದ್ದಾರೆ. ಆ ಕಾರಣದಿಂದಾಗಿ ಸಮಾಜದಲ್ಲಿ ಬದುಕಲು ಧರ್ಮದ ಅಗತ್ಯವಿದೆ ಎಂದು ದಸರೆ ಉದ್ಘಾಟಿಸಿದ ನರಸಿಂಹಯ್ಯ ಹೇಳಿದರು.
ಸಂಸ್ಕೃತಿ ಹಾಗೂ ಕನ್ನಡ ನುಡಿಯನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಾಗಿದೆ. ಎಲ್ಲರೂ ಮಾತೃಭಾಷೆಗೆ ಒತ್ತು ನೀಡಬೇಕು ಎಂದ ನರಸಿಂಹಯ್ಯ- ದಸರೆ ಉದ್ಘಾಟಿಸಲು ಅವಕಾಶ ಕಲ್ಪಿಸುವ ಮೂಲಕ ಸರ್ಕಾರ ತಮ್ಮನ್ನು ಗೌರವಿಸಿದೆ ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ- ಸಾಂಸ್ಕೃತಿಕ ನೆಲೆಗಟ್ಟನ್ನು ವೈಚಾರಿಕತೆಯ ಮೂಲಕ ಕಾಣುವ ಉದ್ದೇಶದಿಂದ ನಾಡಹಬ್ಬವನ್ನು ವಿಚಾರವಾದಿಯಾಬ್ಬರಿಂದ ಉದ್ಘಾಟಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಈ ಮೂಲಕ ದಸರೆಗೆ ಹೊಸ ಆಯಾಮ ದೊರೆತಿದೆ ಎಂದರು.
ಕಂದಾಯ ಸಚಿವ ಎಂ. ಪಿ. ಪ್ರಕಾಶ್, ಕೇಂದ್ರ ಪ್ರವಾಸೋದ್ಯಮ ಸಚಿವೆ ರೇಣುಕಾ ಚೌಧರಿ, ಸಂಸದರಾದ ವಿಜಯ ಶಂಕರ್, ಶಿವಣ್ಣ, ಶಾಸಕರಾದ ಜಿ. ಟಿ. ದೇವೇಗೌಡ, ಎಂ. ಕೆ. ಸೋಮ ಶೇಖರ್, ಡಿ. ಟಿ. ಜಯಕುಮಾರ್, ಶಂಕರ ಲಿಂಗೇಗೌಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications