ಬದುಕು ಜಟಕಾ ಬಂಡಿ; ಅದನೆಳೆಯಲು ಕಲ್ಲು ಕುಟ್ಟುವ 70ರ ನಂಜಮ್ಮ !
ಬದುಕು ಜಟಕಾ ಬಂಡಿ; ಅದನೆಳೆಯಲು ಕಲ್ಲು ಕುಟ್ಟುವ 70ರ ನಂಜಮ್ಮ !
ಗ್ರಾಮೀಣ ಭಾರತದ ಸಾವಿರಾರು ಹೆಣ್ಣುಮಕ್ಕಳ ಪ್ರತಿನಿಧಿಯ ಕಥೆಯಿದು...
ಬೆನ್ನು ಬಾಗಿದ ತಕ್ಷಣ ಕೈಚಾಚುವ, ಕಷ್ಟದ ವಾಸನೆ ಬಂದ ಕೂಡಲೇ ಸಾವಿನ ಮನೆಯ ಬಾಗಿಲು ತಟ್ಟುವ ಮಂದಿ ನಂಜಮ್ಮಳನ್ನು ಒಂದು ಸಲ ನೋಡ ಬೇಕು. ಬಿಸಿಲಿರಲಿ, ಮಳೆಯಿರಲಿ ಹಳ್ಳಿಹಳ್ಳಿ ಸುತ್ತುತ್ತಾ, ತನ್ನ ಪಾಡಿಗೆ ತಾನು ರುಬ್ಬುವ ಒರಳು ಕಲ್ಲಿಗೆ ಮುಳ್ಳು ಹೊಡೆಯುವ ಕಾಯಕವನ್ನು ತಪ್ಪಿಸುವುದಿಲ್ಲ.
ರಾಮನಗರ ತಾಲೂಕಿನ ಅರ್ಚಕರಹಳ್ಳಿಯ ನಂಜಮ್ಮ ಬೋವಿ ಜನಾಂಗಕ್ಕೆ ಸೇರಿದವಳು. ಗಂಡ-ಹೆಂಡತಿ-ಒಬ್ಬ ಮಗ ಹೀಗೆ ಇವರದೊಂದು ಬಡಕುಟುಂಬವಾದರೂ ತೃಪ್ತಿಗೇನೂ ಕೊರತೆಯಿರಲಿಲ್ಲ. ನಂಜಮ್ಮಳ ಗಂಡ ವೆಂಕಟಸ್ವಾಮಿ ಬದುಕಿರುವ ತನಕ ಜೀವನ ಹೇಗೋ ಸಾಗುತ್ತಿತ್ತು. ಕಳೆದ ವರ್ಷ ಆಕೆ ತನ್ನ ಗಂಡನನ್ನು ಕಳೆದುಕೊಂಡಳು. ಈ ಮಧ್ಯೆ ಮಗ ಮನೆತನದ ಕಲ್ಲು ಕುಟ್ಟುವ ಕೆಲಸ ಇಷ್ಟಪಡದೇ ಬೆಂಗಳೂರು ಸೇರಿದ.
ಜಮೀನು-ಅಸ್ತಿ ಒಂದೂ ಇಲ್ಲದ ನಂಜಮ್ಮ ಬದುಕಿಗಾಗಿ ಏನಾದರೂ ಮಾಡಲೇಬೇಕಾಗಿತ್ತು. ಗಂಡ ವೆಂಕಟಸ್ವಾಮಿ ಮಾಡುವ ಕೆಲಸವನ್ನು ಮೊದಲಿಂದಲೂ ಗಮನಿಸುತ್ತಿದ್ದ ನಂಜಮ್ಮ ಕಡೆಗೆ ಅದನ್ನು ಮುಂದುವರೆಸಲು ನಿರ್ಧರಿಸಿದಳು.
ಸೂರ್ಯ ಹುಟ್ಟುವ ಮೊದಲೇ ಎದ್ದು ಚೀಲದಲ್ಲಿ ಸುತ್ತಿಗೆ, ಚಾಣ ಹಾಕಿಕೊಂಡು ಹಳ್ಳಿಗಳತ್ತ ಹೊರಟರೆ ಮತ್ತೆ ಮನೆ ಸೇರುವುದು ಸೂರ್ಯ ತನ್ನ ಮನೆಗೆ ಹೋದ ಮೇಲೆಯೇ. ದಿನಕ್ಕೆ 4-5 ಒರಳು ಕಲ್ಲಿಗೆ ಮುಳ್ಳು ಹೊಡೆಯುವ ಈಕೆ ದಿನಕ್ಕೆ 30 ರಿಂದ 35 ರುಪಾಯಿ ಸಂಪಾದಿಸುತ್ತಾಳೆ.
ತನ್ನ ಇಳಿ ವಯಸ್ಸಿನ ಕಷ್ಟದ ಬಗೆಗೆ ನಂಜಮ್ಮಳಿಗೆ ಬೇಸರ ಇಲ್ಲ. ಎಲ್ಲಾ ಶಿವನ ಇಚ್ಚೆ ಎನ್ನುವ ನಂಬಿಕೆ ಆಕೆಯದು. ನಂಜಮ್ಮ ಬಸವಳಿದಿರುವ ಮಹಿಳೆಯರಿಗೆ ಆದರ್ಶವಾಗಿ ನಿಂತಿದ್ದಾಳೆ.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications