ದೇವದುರ್ಗ ತಾಲ್ಲೂಕಲ್ಲಿ ನಾಲಗೆ ಚಪ್ಪರಿಸಿದ ಮಲೇರಿಯಾಗೆ 15 ಬಲಿ
ದೇವದುರ್ಗ ತಾಲ್ಲೂಕಲ್ಲಿ ನಾಲಗೆ ಚಪ್ಪರಿಸಿದ ಮಲೇರಿಯಾಗೆ 15 ಬಲಿ
ಕಳೆದ ಮೂರು ವರ್ಷಗಳಿಂದ ಸಾವಿನ ಸಂಖ್ಯೆ ಹೆಚ್ಚಳ, ಸರಕಾರಕ್ಕಿಲ್ಲ ಕಳವಳ!
ದೇವದುರ್ಗ ತಾಲೂಕಿನಲ್ಲಿ ಮಲೇರಿಯಾ ತೀವ್ರತೆಯಿಂದ ಈಗಾಗಲೇ ಹದಿನೈದು ಮಂದಿ ಸಾವನ್ನಪ್ಪಿದ್ದಾರೆ. ತಾಲೂಕಿನ ಗಳಗ, ದೇವರಗುಡ್ಡ, ಸೇರಿದಂತೆ 60 ಹಳ್ಳಿಗಳಲ್ಲಿ ಮಲೇರಿಯಾ ಪಸರಿಸಿದೆ. ಕಳೆದ ಮೂರು ವರ್ಷಗಳಿಂದ ಮಲೇರಿಯಾದಿಂದ ತಾಲೂಕು ನಲುಗುತ್ತಿದೆ.
ರೋಗಕ್ಕೆ ತುತ್ತಾಗಿ 2002 ರಲ್ಲಿ ಹತ್ತು ಮಂದಿ, 2003 ರಲ್ಲಿ ಎಂಟು ಮಂದಿ ಮಲೇರಿಯಾಕ್ಕೆ ಬಲಿಯಾಗಿದ್ದಾರೆ. 2004 ರಲ್ಲಿ ಈಗಾಗಲೇ ಹದಿನೈದು ಮಂದಿ ಸಾವನ್ನಪ್ಪಿದ್ದಾರೆ. ಇಷ್ಟಾದರೂ ಸರಕಾರದ ಹಿರಿಯ ಅಧಿಕಾರಿಗಳು ಇತ್ತ ಕಣ್ಣೆತ್ತಿ ಸಹಾ ನೋಡಿಲ್ಲ. 2809 ರೋಗಿಗಳ ರಕ್ತ ಪರೀಕ್ಷೆ ನಡೆಸಲಾಗಿದ್ದು, 850 ಮಂದಿಗೆ ಮಲೇರಿಯಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಈ ಭಾಗದತ್ತ ವೈದ್ಯರನ್ನು ಕಳುಹಿಸಿ, ರೋಗದ ಹತೋಟಿಗೆ ಕ್ರಮತೆಗೆದು ಕೊಳ್ಳುವುದಾಗಿ ತಿಳಿಸಿದ್ದಾರೆ.
ದೇವದುರ್ಗದಲ್ಲಿ ಇಪ್ಪತ್ತು ಹಾಸಿಗೆಗಳ ಅಸ್ಪತ್ರೆ ಆರಂಭಿಸುವ ಭರವಸೆ ನೀಡಿದ್ದ ಸರಕಾರ ಇತ್ತ ತಿರುಗಿ ಸಹಾ ನೋಡಿಲ್ಲ. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ರಾಯಚೂರು ಜಿಲ್ಲಾ ಅಸ್ಪತ್ರೆಗೆ ಹೋದರೆ ಅಲ್ಲಿ ಸ್ತ್ರೀರೋಗ ಮತ್ತು ಮಕ್ಕಳ ತಜ್ಞರಿಲ್ಲ. ಗ್ರಾಮೀಣ ಜನರ ಆರೋಗ್ಯಕಾಯುವಲ್ಲಿ ಸರಕಾರ ವಿಫಲವಾಗಿದೆ ಎನ್ನುವುದು ಈ ಭಾಗದ ಶಾಸಕ ಹನುಮಂತಪ್ಪ ವೈ.ಆಲ್ಕೋಡ್ ಅವರ ದೂರು.
(ಏಜನ್ಸೀಸ್)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications