ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಉಮಾ ಸ್ಪರ್ಧೆ ? ಬಿಜೆಪಿ ಲೆಕ್ಕಾಚಾರ
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಉಮಾ ಸ್ಪರ್ಧೆ ? ಬಿಜೆಪಿ ಲೆಕ್ಕಾಚಾರ
ಬಿಜೆಪಿ ಭದ್ರಕೋಟೆಗೆ ಖರ್ಗೆ ಮೂಲಕ ಲಗ್ಗೆ ಹಾಕಲು ಕಾಂಗ್ರೆಸ್ ಚಿಂತನೆ
ಮತ್ತೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಘೋಷಿಸಿರುವ ಉಮಾರನ್ನು ಮುಂಬರುವ ಬೀದರ್ ಲೋಕಸಭಾ ಮೀಸಲಾತಿ ಕ್ಷೇತ್ರದಿಂದ ಕಣಕ್ಕಿಳಿಸಲು ಪ್ರಯತ್ನಗಳು ನಡೆದಿವೆ. ಬಿಜೆಪಿ ಭದ್ರ ಕೋಟೆಯಾಗಿರುವ ಈ ಕ್ಷೇತ್ರ ರಾಮಚಂದ್ರಪ್ಪ ವೀರಪ್ಪ ನಿಧನದಿಂದ ತೆರವಾಗಿತ್ತು. ಬೀದರನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ.
ಅದನ್ನು ಕಸಿಯಲು ಕಾಂಗ್ರೆಸ್ ಹೊರಟಿದೆ. ಈ ಭಾಗದವರೇ ಆದ ಸಚಿವ ಮಲ್ಲಿಕಾರ್ಜುನ ಖರ್ಗೆಯನ್ನು, ಕ್ಷೇತ್ರದ ಅಭ್ಯರ್ಥಿಯನ್ನಾಗಿಸಲು ಯೋಚಿಸುತ್ತಿದೆ. ಗುರುಮಿಠ್ಕಲ್ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಎಂಟು ಸಲ ಆಯ್ಕೆಗೊಂಡಿರುವ ಖರ್ಗೆ ವರ್ಚಸ್ಸನ್ನು ಬಳಸಿಕೊಳ್ಳಲು ಯೋಚಿಸಲಾಗುತ್ತಿದೆ. ಹೀಗಾದರೆ ಮತ್ತೋಮ್ಮೆ ರಾಜ್ಯದಲ್ಲಿ ಉಮಾ ಕುತೂಹಲಕ್ಕೆ ಕೇಂದ್ರ ಬಿಂದುವಾಗುವುದು ಖಚಿತ.
ಕಾಪಾಡಿದ ಕೃಷ್ಣ : ಕೃಷ್ಣನ ಪರಮ ಭಕ್ತೆಯಾಗಿರುವ ಉಮಾಭಾರತಿ ಕೃಷ್ಣನ ದರ್ಶನದ ನಂತರವೇ ಕಾರಾಗೃಹಕ್ಕೆ ತೆರಳಿದ್ದರು. 14ದಿನಗಳ ಜೈಲುವಾಸ(ಅತಿಥಿ ಗೃಹವಾಸ) ಮುಗಿಸಿ, ಕೃಷ್ಣ ಜನ್ಮಷ್ಟಮಿಯಂದೇ ಬಿಡುಗಡೆಗೊಂಡಿರುವುದು ಮತ್ತೊಂದು ವಿಶೇಷ. ಸೆರೆವಾಸದ ಹದಿನಾಲ್ಕು ದಿನ ಸಹಾ ಕೃಷ್ಣನಿಗೆ ಪೂಜೆ ಸಲ್ಲಿಸದೇ ಹನಿ ನೀರನ್ನು ಅವರು ಮುಟ್ಟಿರಲಿಲ್ಲ.
ನ್ಯಾಯಾಲಯದ ತೀರ್ಪಿನ ನಂತರ ಉಡುಪಿಗೆ ತೆರಳಿ ಆರಾಧ್ಯದೈವ ಕೃಷ್ಣ ಹಾಗೂತಮ್ಮ ಗುರುಗಳಾದ ಪೇಜಾವರ ಶ್ರೀಗಳ ದರ್ಶನ ಪಡೆದಿದ್ದಾರೆ. ರಾಷ್ಟ್ರಧ್ವಜ ಹಾರಿಸುವುದು ತಪ್ಪಲ್ಲ ಎನ್ನುವುದು ನನ್ನ ಬಿಡುಗಡೆಯಿಂದ ಸ್ಪಷ್ಟವಾಗಿದೆ ಎನ್ನುವುದು ಉಮಾ ಪ್ರತಿಕ್ರಿಯೆ.
(ಇನ್ಫಾ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications