ಸಮ್ಮಿಶ್ರ ಸರ್ಕಾರ ಅಜೇಯ ಶತಕ! ಧರ್ಮಸಿಂಗ್ ‘ಪೂರ್ಣಾವಧಿ’ ತವಕ
ಸಮ್ಮಿಶ್ರ ಸರ್ಕಾರ ಅಜೇಯ ಶತಕ! ಧರ್ಮಸಿಂಗ್ ‘ಪೂರ್ಣಾವಧಿ’ ತವಕ
ಎಡರು ತೊಡರು ನೂರು, ಆದರೂ ನಾನು ಸಮಾಧಾನಿ ಎಂದರು ಧರ್ಮಸಿಂಗ್
ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರವಧಿಯ ನೂರು ದಿನಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸೋಮವಾರ (ಸೆ.6) ಮಾತನಾಡಿದ ಧರ್ಮಸಿಂಗ್- ರಾಜ್ಯದ ಮೊದಲ ಸಮ್ಮಿಶ್ರ ಸರಕಾರ ನಮ್ಮದಾಗಿದ್ದು, ಅದನ್ನು ನಿರ್ವಹಿಸುವ ಅವಕಾಶ ನನಗೆ ಲಭ್ಯವಾಗಿದೆ ಎಂದು ಹರ್ಷಿಸಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಐದು ವರ್ಷಗಳನ್ನು ಪೂರ್ಣಗೊಳಿಸುವ ವಿಶ್ವಾಸ ನನಗಿದೆ. ನಾವು ಚುನಾವಣೆ ಎದುರಿಸಲು ಸಿದ್ದರಾಗಿಲ್ಲ. ಎರಡೂ ಪಕ್ಷಗಳ ನಡುವೆ ಏನೇ ವ್ಯತ್ಯಾಸಗಳಿದ್ದರೂ, ಅದನ್ನು ಸರಿಪಡಿಸಿಕೊಳ್ಳುವುದಾಗಿ ಧರ್ಮಸಿಂಗ್ ತಿಳಿಸಿದರು.
ಮಂತ್ರಿ ಮಂಡಲ ವಿಸ್ತರಣೆ ಬಗೆಗಿನ ಪತ್ರಕರ್ತರ ಪ್ರಶ್ನೆಗೆ, ಇದು ಒಂದು ಪಕ್ಷದ ಸರಕಾರವಲ್ಲ. ಸಮ್ಮಿಶ್ರ ಸರಕಾರದಲ್ಲಿ ಇಂಥ ತೊಡಕುಗಳಿರುತ್ತವೆ. ಮಂತ್ರಿ ಮಂಡಲ ವಿಸ್ತರಣೆಯ ಪ್ರಕ್ರಿಯೆ ಆರಂಭಗೊಂಡಿದೆ. ಆದರೆ ದಿನಾಂಕವನ್ನು ಕೇಳಬೇಡಿ. ಸರಕಾರದ ಏರಿಳಿತಗಳನ್ನು ಕಳೆದ ನೂರು ದಿನಗಳಲ್ಲಿ ಎಂಜಾಯ್ ಮಾಡುವಲ್ಲಿ ಮನಸ್ಸು ಸಮತೋಲನ ಸಾಧಿಸಿದೆ. ಈ ಎಲ್ಲದರ ನಡುವೆ ಸಹಾ ಜನಪರ ಕಾಳಜಿಯನ್ನು ಸರಕಾರ ಉಳಿಸಿಕೊಂಡಿದೆ.
ವೃತ್ತಿ ಶಿಕ್ಷಣ ಪ್ರವೇಶದ ಗೊಂದಲವನ್ನು ಸರಕಾರ ಯಶಸ್ವಿಯಾಗಿ ಬಗೆಹರಿಸಿದೆ. ಮಕ್ಕಳಿಗೆ ಬಿಸಿಯೂಟ ಒದಗಿಸುವ ಅಕ್ಷರ ದಾಸೋಹ ಯೋಜನೆ, ನೀರಾವರಿ ಯೋಜನೆ ಮತ್ತಿತರ ಯೋಜನೆಗಳು ಮುಂದುವರೆದಿವೆ ಎಂದು ಮುಖ್ಯಮಂತ್ರಿಗಳು ತಮ್ಮ ಸಾಧನೆಯನ್ನು ಪಟ್ಟಿ ಮಾಡಿದರು.
ಅನಗತ್ಯ : ಉಮಾಭಾರತಿ ಪ್ರಕರಣಕ್ಕೂ ಸರಕಾರಕ್ಕೂ ಸಂಬಂಧವಿಲ್ಲ. ಅದು ಉಮಾಭಾರತಿ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರ. ಈ ಬಗೆಗೆ ನನ್ನ ಪ್ರತಿಕ್ರಿಯೆ ಅನಗತ್ಯ ಎಂದು ಧರ್ಮಸಿಂಗ್ ಉಮಾಭಾರತಿ ಬಿಡುಗಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications