ಮಠ ವಿವಾದ : ಇಳಕಲ್‌ನಲ್ಲಿ ಸ್ವಾಮೀಜಿ ಮೇಲೆ ಹಲ್ಲೆ , ಗಲಭೆ, ಹಿಂಸೆ
ಮಠ ವಿವಾದ : ಇಳಕಲ್‌ನಲ್ಲಿ ಸ್ವಾಮೀಜಿ ಮೇಲೆ ಹಲ್ಲೆ , ಗಲಭೆ, ಹಿಂಸೆ
ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ, ಬಿಗಿ ಪೊಲೀಸ್ ಪಹರೆ
ಈ ಗಲಭೆಯಲ್ಲಿ ಪಿಎಸ್‌ಐ ಪವಾಡಶೆಟ್ಟಿ ಸೇರಿದಂತೆ ಏಳು ಮಂದಿ ಪೊಲೀಸರು ,ನಾಲ್ವರು ಪತ್ರಕರ್ತರು ಹಾಗೂ ಇತರ 30 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಇಳಕಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಚಿತ್ತರಗಿ ಮಠದ ಶ್ರೀಗಳಾದ ಶ್ರೀ ಮಹಾಂತ ಸ್ವಾಮಿಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿನ್ನೆಲೆ : ಸೆ.12ರಂದು ನಡೆಯಲಿರುವ ಇಳಕಲ್ ಚಿತ್ತರಗಿ ಮಠದ ಉತ್ತರಾಧಿಕಾರಿ ನೇಮಕ ಕುರಿತಂತೆ ಸೋಮವಾರ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಶ್ರೀ ಮಹಾಂತ ಸ್ವಾಮಿಗಳು ಹಾಗೂ ನಿಯೋಜಿತ ಉತ್ತರಾಧಿಕಾರಿ ಶ್ರೀ ಸಿದ್ಧರಾಮ ಸ್ವಾಮಿಗಳು ಭಾಗವಹಿಸಿದ್ದರು. ಆದರೆ ಈ ಹೊಸ ಉತ್ತರಾಧಿಕಾರಿಯ ನೇಮಕವನ್ನು ವಿರೋಧಿಸುತ್ತಿರುವ ಚಿತ್ತರಗಿ, ಹೇರೂರ, ಹಾಗೂ ಇತರ ಕೆಲವು ಗ್ರಾಮಗಳ ಸಹಸ್ರಾರು ಜನರು ಇಳಕಲ್ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಉತ್ತರಾಧಿಕಾರಿಯ ನೇಮಕ ಕೈಬಿಡುವಂತೆ ಅವರು ಒತ್ತಾಯಿಸಿದರು.
ಉತ್ತರಾಧಿಕಾರಿ ನೇಮಕವನ್ನು ಸಮರ್ಥಿಸಿ ಇತ್ತೀಚೆಗೆ ಜನಜಾಗೃತಿ ಮೂಡಿಸಲು ನಡೆದ ಮೆರವಣಿಗೆಯ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಚಿತ್ತರಗಿ ಗ್ರಾಮಸ್ಥರು ಪ್ರತಿ ಮೆರವಣಿಗೆ ನಡೆಸಿದ್ದರು. ಈ ಮೆರವಣಿಗೆ ಬಸವೇಶ್ವರ ವೃತ್ತದಿಂದ ಆರಂಭವಾಗಿ ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆ ಅನುಭವ ಮಂಟಪದಲ್ಲಿ ಹಂಪಿಯ ಕನ್ನಡ ವಿಶ್ವ ವಿದ್ಯಾಲಯ ಹಾಗೂ ವಿ.ಮಾ.ವಿ.ವ ಸಂಸ್ಥೆ ಸಂಯುಕ್ತವಾಗಿ ಆಯೋಜಿಸಿದ್ದ ‘ಐತಿಹಾಸಿಕ ಪರಂಪರೆ ಉಳಿಸಿ’ ಸಪ್ತಾಹದಲ್ಲಿ ಭಾಗವಹಿಸಿದ್ದ ಪೂಜ್ಯ ಮಹಾಂತ ಸ್ವಾಮಿಗಳು ಮತ್ತು ಉತ್ತರಾಧಿಕಾರಿ ಸಿದ್ಧರಾಮ ಶ್ರೀಗಳನ್ನು ಗುರಿಯಾಗಿಸಿಕೊಂಡು ಅನುಭವ ಮಂಟಪ ಹೊಕ್ಕ ಸಾವಿರಾರು ಜನರ ಉದ್ರಿಕ್ತ ಗುಂಪು ಸಮಾರಂಭದಲ್ಲಿ ಪ್ರವೇಶಿಸಿ ಘೋಷಣೆ ಕೂಗಿದರು. ಕೆಲವರು ಶ್ರೀಗಳ ವಿರುದ್ಧ ಘೋಷಣೆ ಕೂಗಿದಾಗ ಉದ್ರಿಕ್ತ ವಾತಾವರಣ ಉಂಟಾಯಿತು. ಈ ಸಂದರ್ಭದಲ್ಲಿ ಪರಿಸ್ಥಿತಿ ಬಿಗಡಾಯಿಸಿ ಏಕಾಏಕಿ ಕಲ್ಲು ತೂರಾಟ ಆರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications