ನೋಟಿಸ್‌ಬೋರ್ಡ್ : ಕ್ಷಮಿಸಿ, ಸೆ.15 ರವರೆಗೆ ಸಹಕರಿಸಿ - ಬಿಡಿಎ
ನೋಟಿಸ್‌ಬೋರ್ಡ್ : ಕ್ಷಮಿಸಿ, ಸೆ.15 ರವರೆಗೆ ಸಹಕರಿಸಿ - ಬಿಡಿಎ
ಡೈರಿವೃತ್ತದ ಚಕ್ರವ್ಯೂಹಕ್ಕೆ ಗಣೇಶ ತಂದುಕೊಡುವನು ಮೋಕ್ಷ ?
- ರಾಜು ಮಹತಿ
ಇಂತದೊಂದು ಅರ್ಥದ ಫಲಕ ಬೆಂಗಳೂರಿನ ಡೈರಿ ಸರ್ಕಲ್ಲಿನಲ್ಲಿ ರಾರಾಜಿಸುತ್ತಿದೆ. ಅಲ್ಲಿ ಎದ್ದುನಿಲ್ಲುತ್ತಿರುವ ಫ್ಲೈಓವರ್ ಕಾಮಗಾರಿ ಉಂಟು ಮಾಡುತ್ತಿರುವ ಸದ್ದು , ಧೂಳು ಹಾಗೂ ಟ್ರಾಫಿಕ್ ಕಿರಿಕಿರಿ ಸಂತ್ರಸ್ತರ ಬಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕ್ಷಮೆ ಕೇಳುತ್ತಿರುವುದು ಹೀಗೆ.
ಸಿಲಿಕಾನ್ ವ್ಯಾಲಿಯ ಅಗ್ರಗಣ್ಯ ಐಟಿ ಕಂಪನಿಗಳು ಬೀಡುಬಿಟ್ಟಿರುವ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವುದು ಇದೇ ಡೈರಿ ಸರ್ಕಲ್ಲು . ಈ ಸರ್ಕಲ್ ಮೂಲಕ ಪ್ರಯಾಣಿಸುವುದೆಂದರದು ತಮಾಷೆಯ ಮಾತಲ್ಲ . ನಿಮ್ಮ ಅದೃಷ್ಟ ಚೆನ್ನಾಗಿದ್ದರೆ 10-15 ನಿಮಿಷದಲ್ಲೇ ಸರ್ಕಲ್ ದಾಟಿಬಿಡಬಹುದು. ಇಲ್ಲವಾದಲ್ಲಿ ಖೋಟಾ ಅದೃಷ್ಟದ ಪ್ರಮಾಣಕ್ಕನುಗುಣವಾಗಿ ಅರ್ಧಗಂಟೆಯಿಂದ ಒಂದು ತಾಸಿಗೂ ಹೆಚ್ಚುಕಾಲ ಡೈರಿ ಸರ್ಕಲ್ಲಿನ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದ ಅನುಭವಿಗಳಿದ್ದಾರೆ.
ಸುಮ್ಮನೆ ಸಿಕ್ಕಿಬೀಳುವುದೆಂದರೆ ಹೇಗೂ ಸಹಿಸಿಕೊಳ್ಳಬಹುದೇನೊ. ಆದರೆ ಇಲ್ಲಿನ ಸಂಕಟಗಳು ಒಂದೆರಡಲ್ಲ . ರಸ್ತೆ ಕೊರಕಲು ಬಿದ್ದಿದೆ. ತೆವಳುತ್ತಾ ಸಾಗುವ ವಾಹನಗಳು ಸರ್ಕಸ್ಸು ಮಾಡುತ್ತಲೆ ಮುಂದೆ ಸಾಗಬೇಕು. ಈ ಸರ್ಕಸ್ಸಿನ ನಡುವೆ ಧೂಳು ಬೇರೆ ಮೈಗೆ ಬಂದು ಅಪ್ಪಳಿಸಿ ಅಂಟಿಕೊಳ್ಳುತ್ತದೆ. ಡೈರಿ ಸರ್ಕಲ್ಲು ದಾಟುವ ಹೊತ್ತಿಗೆ ಶರೀರವೆಲ್ಲ ಧೂಳುಮಯ. ಕಣ್ಣು ಕೆಂಪಾಗಿ, ಮೂಗು ಒದ್ದೆಯಾಗಿ, ತುಟಿಯಿಂದ ನಾಲಗೆ-ಗಂಟಲು ಸೇರಿದ ಧೂಳಿನ ಕಣಗಳು.... ಶಿವಶಿವಾ...
ಡೈರಿ ಸರ್ಕಲ್ ಫ್ಲೈ ಓವರ್ ಕಾಮಗಾರಿ ಶುರುವಾಗಿ ಹೆಚ್ಚೂಕಡಿಮೆ ವರ್ಷದ ಮೇಲಾಯಿತು. ಆದರೂ ಈ ಕಾಮಗಾರಿ ಯಾವಾಗ ಮುಗಿಯುತ್ತದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ . ನಡೆಯುತ್ತಿರುವ ಕೆಲಸದ ವೇಗ ನೋಡಿದರೆ ಇನ್ನೂ ಒಂದು ವರ್ಷ ಸಾಲದೆನ್ನಿಸುತ್ತದೆ. ಹೀಗಾಗೇ ಪ್ರತಿನಿತ್ಯ ಪ್ರಯಾಣಿಕರಿಂದ ಸರ್ಕಾರಕ್ಕೆ ಹಾಗೂ ಬಿಡಿಎಗೆ ಶಾಪ. ದೂರುಗಳು ದೊರೆ ಧರ್ಮಸಿಂಗ್‌ವರೆಗೆ ಹೋಗಿವೆಯಂತೆ. ಹಾಗಾಗೇ ಬಿಡಿಎ ನೋಟೀಸು ಫಲಕದ ಮೂಲಕ ಕ್ಷಮೆ ಕೇಳಿಕೊಂಡಿದೆ. ‘We are sorry, flyover will be completed by 15th September 2004’.
ಫ್ಲೈಓವರ್ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಹೊಂದಿಕೊಂಡಂತೆಯೇ ನಿಮ್ಹಾನ್ಸ್ ಹಾಗೂ ಕಿದ್ವಾಯಿ ಆಸ್ಪತ್ರೆಗಳಿವೆ. ಸದಾ ಗಿಜಿಗುಟ್ಟುವ ಈ ಆಸ್ಪತ್ರೆಗಳಿಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಗಳು ಕೊಂಕಣ ಸುತ್ತಿಕೊಂಡು, ಒಂದೆರಡು ಮೈಲು ನಡೆದುಕೊಂಡೇ ಆಸ್ಪತ್ರೆ ಸೇರಬೇಕು ! ಜನರ ಮಾತಿರಲಿ, ಆಸ್ಪತ್ರೆಯ ವ್ಯವಸ್ಥೆಯನ್ನೂ ಕಾಮಗಾರಿ ಸತಾಯಿಸದೆ ಬಿಟ್ಟಿಲ್ಲ . ಕಿದ್ವಾಯಿ ಆಸ್ಪತ್ರೆಯ ಕೂಲರ್‌ಗಳು ಹಾಗೂ ಒಂದಷ್ಟು ಯಂತ್ರೋಪಕರಣಗಳು ಧೂಳಿನ ಕಾರಣ ಹಸಗೆಟ್ಟು ಕೂತಿವೆಯಂತೆ. ತಂತ್ರಜ್ಞರಿಗಂತೂ ದಿನ ಧೂಳು ಒರೆಸುವ ಕೆಲಸ. ರೋಗಿಗಳಿಗೆ ಧೂಳು ಕುಡಿಯುವ ಕರ್ಮ.
ನಿಮ್ಹಾನ್ಸ್ ಆಸ್ಪತ್ರೆಯದೂ ಇದೇ ಕಥೆ. ಇಲ್ಲೂ ಯಂತ್ರಗಳು ಕಿರಿಕಿರಿ ಮಾಡುತ್ತಿವೆ. ಹಾಗಾಗೇ ದೂರು ಮುಖ್ಯಮಂತ್ರಿ ಧರ್ಮಸಿಂಗ್‌ವರೆಗೆ ಮುಟ್ಟಿದೆ. ಧರಂ ಗುರ್ರ್ ಎಂದರೇನೊ ?
ಇನ್ನು ಯಾವುದೇ ಕಾರಣಕ್ಕೂ ತಡವಾಗುವುದಿಲ್ಲ . ಸೆಪ್ಟಂಬರ್ 15ರೊಳಗೆ ಫ್ಲೈಓವರ್ ಕಾಮಗಾರಿ ಕೊನೆಗೊಳ್ಳುವುದು ಖಚಿತ. ಈ ಗಡುವಿಗೆ ನಾವು ಬದ್ಧರಾಗಿದ್ದೇವೆ ಎಂದು ಬಿಡಿಎ ಮುಖ್ಯಮಂತ್ರಿಗಳಿಗೆ ಮಾತು ಕೊಟ್ಟಿದೆಯಂತೆ?
ಸೆಪ್ಟಂಬರ್ 15 ಅಂದರೆ ಗಣೇಶನ ಸಂಭ್ರಮದ ಸಮಯ. ಗಣೇಶ ವಿಘ್ನ ನಿವಾರಕನಲ್ಲವೇ ? ನಂಬಿಕೆ ಇರಿಸಿಕೊಳ್ಳೋಣ.
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications