ನಾಗರಪಂಚಮಿ ಹಬ್ಬದ ಹೊತ್ತು ದಾವಣಗೆರೆಯಲ್ಲಿ ಜೋಡಿ ಕೋಬ್ರಾ
ನಾಗರಪಂಚಮಿ ಹಬ್ಬದ ಹೊತ್ತು ದಾವಣಗೆರೆಯಲ್ಲಿ ಜೋಡಿ ಕೋಬ್ರಾ
ನಾಗರ ನೋಡಲು ಮುಗಿಬೀಳುತ್ತಿರುವ ಬೆಣ್ಣೆದೋಸೆ ನಗರಿಯ ಮಂದಿ
ದಾವಣಗೆರೆಯ ಪ್ರಸಿದ್ಧ ಆಹಾರ ಮಳಿಗೆಗಳಲ್ಲಿ ಆಹಾರ್-2000 ಕೂಡಾ ಒಂದು. ಈ ಆಹಾರದ ಅಂಗಡಿಯಲ್ಲೀಗ ಹಾವು ಬಂದುಬಿಟ್ಟಿದೆ. ಒಂದಲ್ಲಾ ಎರಡು. ಜೋಡಿ ಕೋಬ್ರಾ ! ಆದರೆ ತಮಾಷೆ ನೋಡಿ, ಈ ನಾಗರಗಳಿಗೆ ಯಾರೂ ಹೆದರುತ್ತಿಲ್ಲ . ಏಕೆಂದರೆ ಇವುಗಳಲ್ಲಿ ವಿಷವಿಲ್ಲ ; ಇರುವುದು ಸಕ್ಕರೆ, ಸಿಹಿಯೋ ಸಿಹಿ. ಇದೊಂದು ಕೇಕ್ ಕಲಾಕೃತಿ ಎನ್ನುವ ವಿಷಯ ನಿಮಗೀಗಾಗಲೇ ಅರ್ಥವಾಗಿರಬೇಕು. ಹೌದು, ನಿಜ.
ಕ್ರಿಸ್‌ಮಸ್, ಹೊಸ ವರ್ಷ.... ಇಂಥ ಸಂದರ್ಭಗಳಲ್ಲಿ ಆಹಾರ್-2000 ವಿಶೇಷ ಕೇಕ್‌ಗಳನ್ನು ಪ್ರದರ್ಶಿಸುವುದು ರೂಢಿ (ಬೆಂಗಳೂರಿನಲ್ಲಿ ನೀಲ್‌ಗಿರೀಸ್ ಕೂಡ ಇಂಥ ಪ್ರದರ್ಶಗಳನ್ನು ಏರ್ಪಡಿಸುತ್ತದೆ). ಈ ಬಾರಿ ಆಹಾರ್-2000 ಜೋಡಿ ಕೋಬ್ರಾಗಳ ಕೇಕ್ ಕಲಾಕೃತಿ ಪ್ರದರ್ಶನಕ್ಕಿಟ್ಟಿದೆ. ಅಂಗಡಿಯ ತುಂಬಾ ಜನವೋ ಜನ. ಈ ಬಾರಿ ಏನು ವಿಶೇಷ ಅಂದಿರಾ ? ಅದೇ ಸ್ವಾಮಿ, ನಾಗರ ಪಂಚಮಿ ! ಆ.20ರ ಶುಕ್ರವಾರ ನಾಗರ ಪಂಚಮಿ ; ಸೋದರಿ ನೆನಪಿಸಿದ್ದನ್ನು ಮರೆತಿರಾ ?
ಆಗಸ್ಟ್ 23ರವರೆಗೂ ನಾಗರ ಕೇಕ್‌ಗಳು ಸಾರ್ವಜನಿಕ ಪ್ರದರ್ಶನಕ್ಕಿವೆ ಎಂದು ಅಂಗಡಿ ಮಾಲೀಕ ನಾರಾಯಣ ಭಟ್ ತಿಳಿಸಿದ್ದಾರೆ. 25 ಕೇಜಿಗಳ ಕೇಕ್ ಬಳಸಿ ಈ ಕೋಬ್ರಾಗಳ ತಯಾರಿಸಿದ ಕಲಾವಿದ, ಕೇಕ್ ಮಾಸ್ಟರ್ ಎಂದು ಹೆಸರಾದ ಕುಮಾರ್.
ಕೇಕ್ ಕೋಬ್ರಾಗಳೊಂದಿಗೆ ಹಣ್ಣುಗಳು ಹಾಗೂ ಇನ್ನಿತರ ತಿನಿಸುಗಳೂ ಪ್ರದರ್ಶನಕ್ಕಿವೆ. ಇವುಗಳೆಲ್ಲ ಕೇಕ್ ಆಕೃತಿಗಳೆಂದು ಬೇರೆ ಹೇಳಬೇಕಿಲ್ಲವಷ್ಟೆ ? ಒಟ್ಟಿನಲ್ಲಿ , ಆಹಾರ್-2000 ಹೇಳುವುದಿಷ್ಟೇ , ಕೇಕ್ ತಿನ್ನಿರೋ ನೀವೆಲ್ಲರೂ! ನಾಗರ ಪಂಚಮಿ ಕೇಕ್ ತಿನ್ನಲಿಕ್ಕೊಂದು ನೆಪ. ಏನಂತೀರಿ ?
ಮುಖಪುಟ / ವಾರ್ತೆಗಳು












Click it and Unblock the Notifications