ಆ.25ರೊಳಗೆ ಪೂರ್ಣ ಸಂಪುಟ ರಚನೆ : ಸಿಎಂ ಧರ್ಮಸಿಂಗ್ ವಿಶ್ವಾಸ
ಆ.25ರೊಳಗೆ ಪೂರ್ಣ ಸಂಪುಟ ರಚನೆ : ಸಿಎಂ ಧರ್ಮಸಿಂಗ್ ವಿಶ್ವಾಸ
ಉಭಯ ಪಕ್ಷಗಳ ನಡುವೆ ಹೊಂದಾಣಿಕೆಯಿದೆ, ಸರ್ಕಾರ ಸುಭದ್ರ.
ಆ.15ರ ಭಾನುವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯಪಾಲರು ರಾಜಭವನದಲ್ಲಿ ಏರ್ಪಡಿಸಿದ್ದ ಚಹಾಕೂಟದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಧರ್ಮಸಿಂಗ್ ಸಂಪುಟ ವಿಸ್ತರಣೆ ತಡವಾಗುವುದಕ್ಕೆ ಯಾವುದೇ ನಿರ್ದಿಷ್ಟವಾದ ಸಮಸ್ಯೆಗಳೂ ಇಲ್ಲ ಎಂದರು.
ಕಾಂಗ್ರೆಸ್ ವೀಕ್ಷಕ ವಿಲಾಸ್‌ರಾವ್ ದೇಶ ಮುಖ್ ಮಹಾರಾಷ್ಟ್ರದಲ್ಲಿ ಬಿಜಿಯಾಗಿದ್ದಾರೆ. ಆಗಸ್ಟ್ 20 ರಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಇದೆ. ಆ.21ರಂದು ಎಐಸಿ ಸಿ ವಿಶೇಷ ಅಧಿವೇಶನ ನಡೆಯಲಿದೆ. ಇದರಿಂದಾಗಿ ಕಾಂಗ್ರೆಸ್ ಮುಖಂಡರಿಗೆ ಬಿಡುವಿಲ್ಲ . ಇದನ್ನು ಹೊರತು ಪಡಿಸಿದರೆ ಇನ್ನಾವುದೇ ಸಮಸ್ಯೆ ಇಲ್ಲ ಎಂದ ಧರ್ಮಸಿಂಗ್- ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗಿರುವ ಎರಡೂ ಪಕ್ಷಗಳು ಸಂಪುಟ ವಿಸ್ತರಣೆ ಆಡಳಿತಾತ್ಮಕ ದೃಷ್ಟಿಯಿಂದ ಆದಷ್ಟು ಬೇಗ ಆಗಬೇಕೆಂದು ಹಂಬಲ ಹೊಂದಿವೆ ಎಂದು ಸ್ಪಷ್ಟ ಪಡಿಸಿದರು.
ಆ.15 ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರೊಂದಿಗೆ ಮಾತನಾಡಿದ್ದು, ಸೋಮವಾರ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅಹ್ಮದ್ ಪಟೇಲ್ ಅವರು ಚರ್ಚಿಸಲಿದ್ದಾರೆ. ಅಲ್ಲಿಂದ ಕರೆ ಬಂದರೆ ತಾವು ಕೂಡ ದಿಲ್ಲಿಗೆ ಹೋಗುವೆ ಎಂದು ಧರ್ಮಸಿಂಗ್ ತಿಳಿಸಿದರು. ಒಂದೇ ಕಂತಿನಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆಂಬ ಉದ್ದೇಶವನ್ನು ಎರಡೂ ಪಕ್ಷಗಳು ಹೊಂದಿವೆ. ಯಾವುದಾದರೂ ರಾಜಕೀಯ ಅಡ್ಡಿ ಎದುರಾದರೆ ಒಂದೇ ಕಂತಿನಲ್ಲಿ ಸಚಿವ ಸಂಪುಟ ವಿಸ್ತರಣೆ ಕಾರ್ಯ ನಡೆಯುವುದು ಕಷ್ಟವಾಗಬಹುದು ಎಂದು ಧರ್ಮಸಿಂಗ್ ಅಭಿಪ್ರಾಯಪಟ್ಟರು.
ನಿಗಮ ಮತ್ತು ಮಂಡಳಿಗಳ ನೇಮಕಾತಿಯನ್ನು ಸರ್ಕಾರದ ಪಾಲುದಾರ ಪಕ್ಷಗಳು ಸಮನಾಗಿ ಹಂಚಿಕೊಳ್ಳಬೇಕು ಎಂಬುದು ಸರ್ಕಾರ ರಚನೆಯ ಸಂದರ್ಭದಲ್ಲಿ ನಿರ್ಧಾರವಾಗಿದೆ. ಸಂಪುಟ ವಿಸ್ತರಣೆ ನಂತರ ಈ ನೇಮಕಾತಿ ನಡೆಯಲಿದೆ ಎಂದು ಧರ್ಮಸಿಂಗ್ ತಿಳಿಸಿದರು.
ಸರ್ಕಾರ ಅಸ್ತಿತ್ವಕ್ಕೆ ಬಂದ ನೂರು ದಿನಗಳಲ್ಲಿ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದು ಸರ್ಕಾರ ಮುಂದೆ ಸಾಗುತ್ತಿಲ್ಲ ಎಂಬ ಅನೇಕರು ಹೇಳುತ್ತಿದ್ದರೂ, ಸರ್ಕಾರ ಯಾವುದೆ ಸಮಸ್ಯೆಗಳಿಲ್ಲದೇ ಸರಾಗವಾಗಿ ಸಾಗಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ನಾಲ್ಕು ಸಮಸ್ಯೆಗಳು ಎದುರಾದವು. ಅವುಗಳೆಂದರೆ : ಅಕ್ಕಿಹಗರಣ. ರಾಜ್ಯಕ್ಕೆ 40 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬಿಡುಗಡೆಯಾಗುದೆ. ಅದರಲ್ಲಿ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದಂತೆ 17 ಸಾವಿರ ಮೆಟ್ರಿಕ್ ಟನ್ ಅಕ್ಕಿಯದು ಮಾತ್ರ ಸಮಸ್ಯೆಯಾಗಿದೆ. ಇಂಜಿನಿಯರ್ ಗಳ ಜೊತೆ ಸರ್ಕಾರ ಮಾತಾನಾಡಿದ್ದು ಅವರು ಕೂಲಿಗಾಗಿ ಕಾಳು ಯೋಜನೆಯನ್ನು ಮುಂದುವರೆಸುವುದಾಗಿ ಭರವಸೆ ನೀಡಿದ್ದಾರೆ. ಅಕ್ಕಿ ಹಗರಣದ ತನಿಖೆಯಲ್ಲಿ ಸರ್ಕಾರ ಹಿಂದೇಟು ಹಾಕುತ್ತಿಲ್ಲ.
ಎರಡನೇ ಸಮಸ್ಯೆ ಸಿಇಟಿ ವಿವಾದ . ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರ ನ್ಯಾಯಮೂರ್ತಿಗಳಾದ ವೆಂಕಟ ರಾಮನ್ ಸಮಿತಿ ಮತ್ತು ನ್ಯಾಯಮೂರ್ತಿ ಮುರುಗೋಡು ಸಮಿತಿಯನ್ನು ರಚನೆ ಮಾಡಿದೆ . 75:25 ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಲು ಕಾನೂನು ರೂಪಿಸಿದೆ. ಈ ವಿಚಾರ ನಾಳೆ ಸುಪ್ರೀಕೋರ್ಟ ಮುಂದೆ ಬರಲಿದ್ದು ಅದರ ಸಂಪೂರ್ಣ ಜವಾಬ್ದಾರಿಯನ್ನು ವೀರಪ್ಪ ಮೊಯಿಲಿ ಅವರಿಗೆ ವಹಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸಲಾಗುತ್ತಿದೆ. ಇನ್ನುಳಿದ ವರ್ಗಗಳ ವಿದ್ಯಾರ್ಥಿ ಗಳ ಶುಲ್ಕ ವ್ಯತ್ಯಾಸದ ಹಣ ಭರಿಸಲು ಸಹಾಯ ಮಾಡುವಂತೆ ಆಡಳಿತ ಮಂಡಳಿಗಳ ಮನವೊಲಿಸಲಾಗುತ್ತಿದೆ ಎಂದು ಧರ್ಮಸಿಂಗ್ ತಿಳಿಸಿದರು.
ನಿವೃತ್ತ ಪೊಲೀಸ ಅಧಿಕಾರಿ ಸಂಗ್ರಾಮ್‌ಸಿಂಗ್ ಹೇಳಿಕೆ ಸರ್ಕಾರ ಎದುರಿಸಿದ ಮೂರನೇ ಸಮಸ್ಯೆ. ಈ ಬಗ್ಗೆ ಪತ್ರಿಕೆಗಳು ಸಾಕಷ್ಟು ಬರೆದವು. ವಿರೋಧ ಪಕ್ಷಗಳು ಕೂಡ ಸದನ ನಡೆಸಲು ಬಿಡುವುದಿಲ್ಲ ಎಂಬ ಮಾತನಾಡಿದ್ದವು. ಆದರೆ ಸದನದಲ್ಲಿ ಸರ್ಕಾರ ತಕ್ಕ ಉತ್ತರ ನೀಡಿತು. ಛಾಪಾ ಕಾಗದ ಹಗರಣದಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಈ ತನಿಖೆ ಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಎಂಐಸಿ ಮತ್ತು ಭೂಹಗರಣ ನಾಲ್ಕನೇ ಸಮಸ್ಯೆ. ವಿಧಾನಸಭೆಯಲ್ಲಿ ಮೂರು ದಿನಗಳ ಕಾಲ ಚರ್ಚೆ ನಡೆಯಿತು. ಸರ್ಕಾರ ಸ್ಪಷ್ಟ ವಾದ ಉತ್ತರ ನೀಡಿದೆ. ಈ ವಿಚಾರದಲ್ಲಿ ಕಂದಾಯ ಮಂತ್ರಿ, ಲೋಕೋಪಯೋಗಿ ಮಂತ್ರಿ, ಕೈಗಾರಿಕೆ ಮಂತ್ರಿ, ಮುಖ್ಯಮಂತ್ರಿ ಉತ್ತರ ನೀಡಿದ್ದೇವೆ. ನಾವೆಲ್ಲಾ ಒಂದು ಎಂಬುದನ್ನು ಕೂಡ ಈ ಮೂಲಕ ಸಾಬೀತು ಮಾಡಿದ್ದೇವೆ ಎಂದು ಧರ್ಮಸಿಂಗ್ ತಿಳಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications