ಸ್ವರ್ಣವಲ್ಲಿ ಮಠದಲ್ಲಿ ಆ.6ರಿಂದ ‘ರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನ’
ಸ್ವರ್ಣವಲ್ಲಿ ಮಠದಲ್ಲಿ ಆ.6ರಿಂದ ‘ರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನ’
ಖಗೋಳಶಾಸ್ತ್ರದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಜ್ಯೋತಿಷ್ಯಶಾಸ್ತ್ರದ ಮಿತಿ ಕುರಿತು ಚರ್ಚೆ
ಆಧುನಿಕ ಖಗೋಳಶಾಸ್ತ್ರದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಜ್ಯೋತಿಷ್ಯಶಾಸ್ತ್ರದ ಮಿತಿ ಹಾಗೂ ಶಕ್ತಿಯ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುವುದು. ಆಗಸ್ಟ್ 6 ರಿಂದ 8ರವರೆಗೆ ಈ ಸಮ್ಮೇಳನ ನಡೆಯಲಿದೆ. ಸ್ವರ್ಣವಲ್ಲಿ ಸಂಸ್ಥಾನಕ್ಕೆ ಸೇರಿದ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲಗಳ ಇಲಾಖೆ ಈ ಸಮ್ಮೇಳನ ಏರ್ಪಡಿಸಿದೆ ಎಂದು ಸ್ವರ್ಣವಲ್ಲಿ ಸಂಸ್ಥಾನದ ಪೀಠಾಧಿಪತಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ್ಯೋತಿಷ್ಯಾಸ್ತ್ರಕ್ಕೆ ಪುರಾಣಕಾಲದಿಂದಲೂ ಆಧಾರಗಳಿದ್ದು, ವೇದಗಳಲ್ಲೂ ಮಹತ್ವದ ಉಲ್ಲೇಖಗಳಿವೆ. ವೇದಗಳಲ್ಲಿ ಭವಿಷ್ಯ ಕೂಡ ಒಂದು ಪ್ರಮುಖವಾಗ ವಿಭಾಗವಾಗಿದೆ. ಅನೇಕ ಮಂದಿ ಭವಿಷ್ಯಶಾಸ್ತ್ರದ ಕವಲುಗಳನ್ನು ವಿಸ್ತರಿಸುತ್ತಾ , ಜ್ಞಾನಶಾಖೆಗೆ ನೀರೆರೆದಿದ್ದಾರೆ. ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಅವರ ಕೊಡುಗೆ ಈ ನಿಟ್ಟಿನಲ್ಲಿ ಮಹತ್ವವಾದುದು. ಈ ಕೊಡುಗೆಗಳನ್ನು ಆಧುನಿಕ ಸಂದರ್ಭದಲ್ಲಿ , ಆಧುನಿಕ ವಿಧಾನಗಳಿಗೆ ಅಳವಡಿಸಿಕೊಳ್ಳಬೇಕಾಗಿದೆ.
ಪರಂಪರೆ ಹಾಗೂ ಆಧುನಿಕತೆಯ ಮಿಳಿತದ ಸಾಧ್ಯತೆಗಳು ಮಾತ್ರವಲ್ಲದೆ, ಪ್ರಸ್ತುತ ಜ್ಯೋತಿಷ್ಯಾಸ್ತ್ರ ಎದುರಿಸುತ್ತಿರುವ ಅನೇಕ ಸವಾಲುಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಸಾಲಿಗ್ರಾಮದ ಶ್ರೀನಿವಾಸ ಅಡಿಗ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ತಿರುಪತಿಯ ಡಾ.ಸ್ವಾಮಿನಾಥನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮೈಸೂರಿನ ಪಂಡಿತ್ ಕೆ.ವರದಾಚಾರ್ಯ ಪ್ರಮುಖ ಭಾಷಣ ಮಾಡುವರು. ಪ್ರಮುಖ ಜ್ಯೋತಿಷ್ಕರು ಸಮ್ಮೇಳನದಲ್ಲಿ ತಮ್ಮ ಪ್ರಬಂಧ ಮಂಡಿಸುವರು ಎಂದು ಪ್ರಕಟಣೆ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications