‘ಅಮ್ಮನ ಮಂದಿರ’ ಕ್ಕಾಗಿ ಮಾವಿನ ತೋಪಿಗೆ ಕೊಡಲಿ ಗುರಿಯಿಟ್ಟರು !
‘ಅಮ್ಮನ ಮಂದಿರ’ ಕ್ಕಾಗಿ ಮಾವಿನ ತೋಪಿಗೆ ಕೊಡಲಿ ಗುರಿಯಿಟ್ಟರು !
ದೇಗುಲ ಕಟ್ಟಲೆಂದು ದೈವಸ್ವರೂಪಿಗಳಾದ ಮರಗಳ ಕಡಿಯುವುದು ಯಾವ ನ್ಯಾಯ ?
- ದಟ್ಸ್‌ಕನ್ನಡ ಬ್ಯೂರೊ
ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲೊಂದು ಹಳ್ಳಿ. ಅಡವಿಗೊಲ್ಲಾವರ ಎಂದು ಹೆಸರು. ಇಲ್ಲಿನ ಗುಂಡುತೋಪು ಪ್ರದೇಶವೆಂದರೆ ಅದು ಮಾವಿನ ಮರಗಳ ತೋಪು. ಮರಗಳೆಂದರೆ ಸಣ್ಣ ಮರಗಳಲ್ಲ ; ವಿಶಾಲವಾಗಿ ಕೊಂಬೆರೆಂಬೆ ಚಾಚಿಕೊಂಡ ಬೃಹತ್ ಮರಗಳು. ಇಂಥದೊಂದು ತೋಪಿನಲ್ಲೀಗ ಅನೇಕ ಮರಗಳು ಮಾಯವಾಗಿವೆ. ಎಲ್ಲವೂ ಸಪ್ಪಲಮ್ಮ ದೇವಿಯ ಕೃಪೆಗಾಗಿ.
ಸಪ್ಪಲಮ್ಮ ದೇವತೆಗೊಂದು ಗುಡಿಯ ಕಟ್ಟಬೇಕು ಎನ್ನುವ ವಿಚಾರ ಗ್ರಾಮಸ್ಥರ ತಲೆಗೆ ಯಾವಾಗ ಹೊಳೆಯಿತೋ ಏನೋ, ಮಾವಿನ ತೋಪಿಗೆ ಗ್ರಹಚಾರ ವಕ್ಕರಿಸಿದ್ದೇ ಆಗ. ಮಾವಿನ ಮರಗಳನ್ನು ಕಡಿದು ಮಾರಿ, ಬಂದ ಹಣದಲ್ಲಿ ದೇವಸ್ಥಾನ ಕಟ್ಟುವುದೆಂದು ಗ್ರಾಮಸ್ಥರು ತೀರ್ಮಾನಿಸಿದರು. ಸರಿ ಹಸಿರುಮೇಧವೂ ಪ್ರಾರಂಭವಾಯಿತು. ಸುಮಾರು 30 ಮರಗಳನ್ನು ಬುಡಮಟ್ಟ ಕಡಿದು ಮಾರಿದ್ದೂ ಆಯಿತು. ಇನ್ನಷ್ಟು ಮರಗಳಿಗೆ ಕೊಡಲಿ ಗುರಿ ಇಟ್ಟಿದ್ದೂ ಆಯಿತು. ಆಗ ಅಡ್ಡಬಂದದ್ದು ಅರಣ್ಯ ಇಲಾಖೆ.
ಸದ್ಯಕ್ಕೆ ತೋಪಿನಲ್ಲಿ ಉಳಿದಿರುವುದು 24 ಮರಗಳು ಮಾತ್ರ!
ಹಳ್ಳಿಯ ಮಾವಿನ ಮರಗಳು ಪಕ್ಷಿಗಳಿಗೆ ಗೂಡು ಒದಗಿಸಿದ್ದವು. ಇದೇ ಮರಗಳ ನೆರಳಿನಲ್ಲಿ ಹಾದಿಹೋಕರು ದಣಿವು ಕಳಕೊಂಡು ಮುಂದೆ ಸಾಗುತ್ತಿದ್ದರು. ಮಾವಿನ ಸುಗ್ಗಿಯಲ್ಲಂತೂ ತೋಪಿನಲ್ಲಿ ಹಬ್ಬದ ವಾತಾವರಣ. ಹಳ್ಳಿಯ ಯಾವ ಮನೆಯಲ್ಲಿ ಸಂಭ್ರಮ ಜರುಗಿದರೂ ಇದೇ ತೋಪಿನ ಮರಗಳ ಎಲೆಗಳ ತೋರಣವೇ ಆಗಬೇಕಿತ್ತು . ಹೀಗಿದ್ದೂ ತೋಪಿನ ನಾಶಕ್ಕೆ ಜನ ಕೊಡಲಿ ಎತ್ತಿದರು.
ಅರಣ್ಯ ಇಲಾಖೆ ಗ್ರಾಮಸ್ಥರ ಕೊಡಲಿಗೆ ಸದ್ಯಕ್ಕೆ ತಡೆಯಾಡ್ಡಿದೆ. ಆದರೆ, ಉಳಿದ 24 ಮರಗಳನ್ನು ಕಡಿದೇ ತೀರಲು ಹಳ್ಳಿಗರು ನಿರ್ಧರಿಸಿದ್ದಾರೆ, ಅದಕ್ಕಾಗಿ ಸ್ಥಳೀಯ ರಾಜಕಾರಣಿಗಳ ನೆರವು ಪಡೆಯುತ್ತಿದ್ದಾರೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮರಗಳನ್ನು ದೇವತೆಗಳೆಂದು ನಮಮ ಪೂರ್ವಿಕರು ಪೂಜಿಸುತ್ತಿದ್ದರು. ಮತ್ತೊಂದು ದೇವರಿಗೆ ದೇಗುಲ ಕಟ್ಟಲೆಂದು ದೈವಸ್ವರೂಪಿಗಳಾದ ಮರಗಳನ್ನು ಕಡಿಯುವುದು ಯಾವ ನ್ಯಾಯ ? ಎಂದು ಅರಣ್ಯಇಲಾಖೆಯ ರೇಂಜ್ ಆಫೀಸರ್ ಎಸ್.ವಿ.ಕಂಬಳ್ಳಿ ಧರ್ಮಪ್ರಶ್ನೆ ಎತ್ತಿದ್ದಾರೆ. ಅವರ ಪ್ರಯತ್ನಗಳಿಗೆ ಜಯವಾಗಲಿ. ಪರಿಸರವಾದಿಗಳ ಕೂಗು ಅರಣ್ಯರೋದನ ಆಗದಿರಲಿ.
ತಾಯಿ ಸಪ್ಪಲಮ್ಮ , ನಿನ್ನ ಭಕ್ತರಿಗಿಷ್ಟು ಬುದ್ಧಿ ಕೊಡು !
ಮುಖಪುಟ / ವಾಟ್ಸ್ ಹಾಟ್












Click it and Unblock the Notifications