‘ಬೆಂಗಳೂರ್ ಟು ಬಳ್ಳಾರಿ’ : ಗಾಂಧಿ ಜಯಂತಿಯಿಂದ ನಿತ್ಯ ವಿಮಾನ
‘ಬೆಂಗಳೂರ್ ಟು ಬಳ್ಳಾರಿ’ : ಗಾಂಧಿ ಜಯಂತಿಯಿಂದ ನಿತ್ಯ ವಿಮಾನ
ಜಿಲ್ಲೆಯ ಕೈಗಾರಿಕೆ ಹಾಗೂ ಹಂಪಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಕ್ರಿಯೆಗೆ ಇನ್ನಷ್ಟು ಬಲ
ಮುಂಬರುವ ಅಕ್ಟೋಬರ್ 2ರ ಗಾಂಧಿ ಜಯಂತಿಯಿಂದ ಡೆಕ್ಕನ್ ಏವಿಯೇಷನ್ ಖಾಸಗಿ ಸಂಸ್ಥೆ ಬೆಂಗಳೂರಿನಿಂದ ಬಳ್ಳಾರಿಗೆ ಪ್ರತಿದಿನ ವಿಮಾನಗಳನ್ನು ಓಡಿಸಲಿದೆ. 48 ಆಸನಗಳ ಸಾಮರ್ಥ್ಯದ ವಿಮಾನ ಸಂಚಾರ ಅ.2ರಿಂದ ಆರಂಭವಾಗುವ ಮೂಲಕ ಉತ್ತರ ಕರ್ನಾಟಕ ಜನತೆಯ ಬಹುದಿನದ ಕನಸು ನನಸಾಗಲಿದೆ ಎಂದು ಕಂದಾಯ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ.ಪ್ರಕಾಶ್ ಹಾಗೂ ಕೈಗಾರಿಕಾ ಸಚಿವ ಪಿಜಿಆರ್ ಸಿಂಧ್ಯಾ ಗುರುವಾರ (ಜು.15) ಸುದ್ದಿಗಾರರಿಗೆ ತಿಳಿಸಿದರು.
ವಿಜಯನಗರ ಉಕ್ಕು ಸ್ಥಾವರಕ್ಕೆ ಸೇರಿದ ತೋರಣಗಲ್ ವಾಯುನೆಲೆಯನ್ನು ಡೆಕ್ಕನ್ ಏವಿಯೇಷನ್ ಸಂಸ್ಥೆ ತನ್ನ ಹಾರಾಟ ಪ್ರಕ್ರಿಯೆಯ ನೆಲೆ ಮಾಡಿಕೊಳ್ಳಲಿದೆ. ರನ್‌ವೇ ಹಾದಿಯಲ್ಲಿ ಹೆಚ್ಚಳ, ರಾತ್ರಿ ವಿಮಾನ ತಂಗಲಿಕ್ಕೆ ಸೌಲಭ್ಯಗಳು ಸೇರಿದಂತೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿ ವೆ ಎಂದು ಸಚಿವ ಸಿಂಧ್ಯಾ ಹೇಳಿದರು.
ಬಳ್ಳಾರಿಯನ್ನು ವಾಯುಸಾರಿಗೆ ನಕ್ಷೆಯಲ್ಲಿ ಸೇರಿಸುವ ಮೂಲಕ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಹಂಪಿಯಲ್ಲಿನ ಪ್ರವಾಸೋದ್ಯಮಕ್ಕೂ ಅನುಕೂಲವಾಗುವುದು. ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಎರಡೂ ಕ್ಷೇತ್ರಗಳ ಅಭಿವೃದ್ಧಿಗೆ ಈ ವಾಯು ಸಂಚಾರ ಪೂರಕವಾಗಲಿದೆ ಎಂದು ಇಬ್ಬರೂ ಸಚಿವರು ಅಭಿಪ್ರಾಯಪಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications