ಭಾಗವತರಿಂದ ‘ವೈ.ಕೆ.ಮುದ್ದುಕೃಷ್ಣರಿಗೆ ಅಭಿನಂದನೆ : ಸಂಗೀತ ಗುಚ್ಛ’
ಭಾಗವತರಿಂದ ‘ವೈ.ಕೆ.ಮುದ್ದುಕೃಷ್ಣರಿಗೆ ಅಭಿನಂದನೆ : ಸಂಗೀತ ಗುಚ್ಛ’
ಜುಲೈ 10ರ ಶನಿವಾರ ಬೆಳಗ್ಗೆ 7ರಿಂದ ಜು.11ರ ಭಾನುವಾರ ಬೆಳಗ್ಗೆ 7ರವರೆಗೆ ಸತತ 24 ತಾಸು ಹಾಡುಹಬ್ಬ.
ಬೆಂಗಳೂರು : ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಎತ್ತಿದ ಕೈ ಎನಿಸಿರುವ ‘ಭಾಗವತರು’ ಸಂಸ್ಥೆ , ಇದೀಗ ವೈ.ಕೆ.ಮುದ್ದುಕೃಷ್ಣ ಅವರನ್ನು ಅಭಿನಂದಿಸುವ ವಿಶಿಷ್ಟ ಕಾರ್ಯಕ್ರಮವೊಂದಕ್ಕೆ ವೇದಿಕೆ ಸಜ್ಜುಪಡಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಮುದ್ದುಕೃಷ್ಣ ಅವರನ್ನು ಅಹೋರಾತ್ರಿ ಸಂಗೀತ ರಸಧಾರೆಯ ಮೂಲಕ ಗೌರವಿಸಲು ‘ಭಾಗವತರು’ ಸಂಸ್ಥೆ ಹಾಡುಹಬ್ಬ ಕಾರ್ಯಕ್ರಮ ರೂಪಿಸಿದೆ. ಜುಲೈ 10ರ ಶನಿವಾರ ಬೆಳಗ್ಗೆ 7 ಗಂಟೆಯಿಂದ ಜು.11ರ ಭಾನುವಾರ ಬೆಳಗ್ಗೆ 7ರವರೆಗೆ ಈ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಹಿಂದೂಸ್ತಾನಿ- ಕರ್ನಾಟಕ ಸಂಗೀತ, ವಚನ ಗಾಯನ, ಚಿತ್ರಗೀತೆ, ಯಕ್ಷಗಾನ, ಸುಗಮ ಸಂಗೀತ, ಛಾಯಾಚಿತ್ರ ಪ್ರದರ್ಶನ ಮುಂತಾದ ವಿವಿಧ ಕಾರ್ಯಕ್ರಮಗಳು ವೈ.ಕೆ.ಮುದ್ದುಕೃಷ್ಣ ಗೌರವಾರ್ಥ ನಡೆಯುವ ಹಾಡುಹಬ್ಬಕ್ಕೆ ರಂಗೇರಿಸಲಿವೆ. ಸಂಗೀತ ವಿದುಷಿ ಶ್ಯಾಮಲಾ ಭಾವೆ ಈ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಪುತ್ತೂರು ನರಸಿಂಹ ನಾಯಕ್, ಸುಭದ್ರಮ್ಮ ಮನ್ಸೂರ್, ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಪಂಡಿತ್ ಕುಮಾರದಾಸ, ಚಂದ್ರಿಕಾ ಗುರುರಾಜ್, ಸಿ.ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಬಿ.ಕೆ.ಸುಮಿತ್ರಾ, ರತ್ನಮಾಲಾ ಪ್ರಕಾಶ್, ಕಸ್ತೂರಿ ಶಂಕರ್, ಮಾಲತಿ ಶರ್ಮ, ಇಂದು ವಿಶ್ವನಾಥ್, ಎಂ.ಕೆ.ಜಯಶ್ರೀ ಮುಂತಾದವರ ಕಂಠ ರವೀಂದ್ರ ಕಲಾಕ್ಷೇತ್ರದಲ್ಲಿ ಮೊಳಗಲಿದೆ. ಸ್ವತಃ ಮುದ್ದುಕೃಷ್ಣ ಅವರೂ ಹಾಡಲಿದ್ದಾರೆ.
ಪಂಡಿತ್ ರಾಜಶೇಖರ ಮನ್ಸೂರ್ ಹಾಗೂ ಪಂಡಿತ್ ಪರಮೇಶ್ವರ ಹೆಗಡೆ ಅವರ ಹಿಂದೂಸ್ತಾನಿ ಗಾಯನ, ಉಸ್ತಾದ್ ಬಾಲೆಖಾನ್ ಮತ್ತು ಸಹೋದರರ ಸಿತಾರ್ ವಾದನ ಉಳಿದ ವಿಶೇಷಗಳು.
ಹಾಡುಹಬ್ಬದ ಕೇಂದ್ರಬಿಂದುವಾದ ಮುದ್ದುಕೃಷ್ಣ ಅಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ವಹಿಸುವರು. ಡಾ.ದೇ.ಜವರೇಗೌಡ ಅಭಿನಂದಿಸುವರು. ಟಿ.ಎನ್.ಸೀತಾರಾಂ, ಸಿದ್ಧಯ್ಯ, ಕೆ.ಲಕ್ಷ್ಮಿನಾರಾಯಣ, ವೈ.ಕೆ.ಪುಟ್ಟಸೋಮೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ನೆನಪಿಡಿ, ಜುಲೈ 10ರ ಶನಿವಾರ ಬೆಳಗ್ಗೆ 7ರಿಂದ, ಜುಲೈ 11 ರ ಭಾನುವಾರ ಬೆಳಗ್ಗೆ 7ರವರೆಗೂ ‘ವೈ.ಕೆ.ಮುದ್ದುಕೃಷ್ಣರಿಗೆ ಅಭಿನಂದನೆ : ಸಂಗೀತ ಗುಚ್ಛ’ ಕಾರ್ಯಕ್ರಮ ನಿರಂತರವಾಗಿ ನಡೆಯುವುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications