ಸಿಇಟಿ ಇಕ್ಕಟ್ಟು: ಮಾತುಕತೆ ವಿಫಲ,ಕುದುರೆ ಬಿಟ್ಟಿಳಿಯದ ಕಾಮೆಡ್-ಕೆ
ಸಿಇಟಿ ಇಕ್ಕಟ್ಟು: ಮಾತುಕತೆ ವಿಫಲ,ಕುದುರೆ ಬಿಟ್ಟಿಳಿಯದ ಕಾಮೆಡ್-ಕೆ
ಜುಲೈ 8ರಿಂದ ಕೌನ್ಸೆಲಿಂಗ್, ಬೆನ್ನು ತಿರುಗಿಸಿರುವ ಖಾಸಗಿ ಕಾಲೇಜುಗಳು
ಬುಧವಾರದ ಸಭೆಯಲ್ಲಿ ಸರ್ಕಾರ ಹಾಗೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಕಾಮೆಡ್-ಕೆ ತಂತಮ್ಮ ನಿಲುವಿಗೆ ಅಂಟಿಕೊಂಡ ಕಾರಣ ಮಾತುಕತೆ ವಿಫಲವಾಯಿತು. ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗದಿದ್ದರೂ ಈ ಮುನ್ನ ನಿಗದಿಪಡಿಸಿದಂತೆ ಜುಲೈ 8ರಿಂದಲೇ ಸಿಇಟಿ ಕೌನ್ಸೆಲಿಂಗ್ ಆರಂಭವಾಗಲಿದೆ ಎಂದು ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಿ.ಮಂಜುನಾಥ್ ತಿಳಿಸಿದರು.
ಸರ್ಕಾರದ 75 : 25 ಸೀಟು ಹಂಚಿಕೆ ಸೂತ್ರವನ್ನು ಒಪ್ಪಿಕೊಳ್ಳಲು ಕಾಮೆಡ್-ಕೆ ಅಧ್ಯಕ್ಷ ಆರ್.ಎಲ್.ಜಾಲಪ್ಪ ನಿರಾಕರಿಸಿದರು. ಮುರುಗೋಡು ಸಮಿತಿಯ ಶಿಫಾರಸ್ಸಿನಂತೆ ಶುಲ್ಕ ನಿಗದಿಪಡಿಸಲು ಕೂಡ ತಕರಾರು ಎತ್ತಿದ ಜಾಲಪ್ಪ, ಸಮಿತಿ ನಿಗದಿಪಡಿಸಿರುವ ಶುಲ್ಕದಲ್ಲಿ ಪಶು ವೈದ್ಯಕೀಯ ಕಾಲೇಜು ಮಾತ್ರ ನಡೆಸಬಹುದು ಎಂದು ಕಟಕಿಯಾಡಿದರು.
ಪ್ರತಿಶತ 50 ಸೀಟುಗಳನ್ನು ಖಾಸಗಿ ಕಾಲೇಜುಗಳಿಗೆ ಬಿಟ್ಟುಕೊಡಲು ಹಾಗೂ ಪರಿಷ್ಕೃತ ಶುಲ್ಕ ಪದ್ಧತಿಯನ್ನು ಜಾರಿಗೊಳಿಸಲು ಜಾಲಪ್ಪ ಪಟ್ಟು ಹಿಡಿದರು. ತಮ್ಮ ಬೇಡಿಕೆಗಳಿಗೆ ಸರ್ಕಾರ ಒಪ್ಪಿಕೊಳ್ಳದಿದ್ದರೆ ಸಿಇಟಿ ಅನ್ವಯ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗುವುದು, ಬದಲಿಗೆ ಮೆರಿಟ್ ಪ್ರಕಾರ ಪ್ರವೇಶ ಕಲ್ಪಿಸಲಾಗುವುದು ಎಂದೂ ಕಾಮೆಡ್-ಕೆ ಪರವಾಗಿ ಜಾಲಪ್ಪ ಹೇಳಿದರು.
ಬಜೆಟ್ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ಧರಾಮಯ್ಯ ಬುಧವಾರದ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ .
ಜುಲೈ 4 ರಂದು ಸಭೆ : ಬುಧವಾರದ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಈಗ ಎಲ್ಲ ನಿರೀಕ್ಷೆಯ ಕಣ್ಣುಗಳೂ ಜುಲೈ 4ರತ್ತ ಹೊರಳಿವೆ. ಖಾಸಗಿ ಕಾಲೇಜುಗಳ ಆಡಳಿತ ವರ್ಗದ ಸಭೆಯನ್ನು ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಜುಲೈ 4ರಂದು ಕರೆದಿದ್ದಾರೆ. ಸಂಪುಟ ಉಪ ಸಮಿತಿ ಸಭೆಯೂ ಜು.4ರಂದು ನಡೆಯಲಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications