ರಾಜ್ಯಸಭೆ ‘ರೇಸ್’ನಲ್ಲಿ ಜಾಗತಿಕ ಖ್ಯಾತಿಯ ಕುದುರೆಧಣಿ ರಾಮಸ್ವಾಮಿ
ರಾಜ್ಯಸಭೆ ‘ರೇಸ್’ನಲ್ಲಿ ಜಾಗತಿಕ ಖ್ಯಾತಿಯ ಕುದುರೆಧಣಿ ರಾಮಸ್ವಾಮಿ
ಬಿಜೆಪಿಯಿಂದ ವೆಂಕಯ್ಯ ನಾಯ್ಡು, ಶಕುಂತಲಾ ಹೆಗಡೆ ಸ್ಪರ್ಧೆ
ರಾಜ್ಯದಿಂದ ನಾಲ್ಕು ಮಂದಿ ರಾಜ್ಯಸಭೆಯನ್ನು ಪ್ರವೇಶಿಸಲು ಅವಕಾಶವಿದ್ದು, ಈ ನಾಲ್ಕು ಸ್ಥಾನಗಳಿಗಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಜಿದ್ದಾಜಿದ್ದಿನ ಸ್ಪರ್ಧೆ ನಡೆಸಿವೆ. ಬುಧವಾರ (ಜೂ.16) ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಕುದುರೆ ರೇಸ್ ಧಣಿ ರಾಮಸ್ವಾಮಿ ಅವರು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣಾ ಕಣ ರಂಗೇರಿತು.
ಬಿಜೆಪಿ ರಾಷ್ಟ್ರಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು , ದಿವಂಗತ ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲಾ ಹೆಗ್ಗಡೆ ನಾಮಪತ್ರ ಸಲ್ಲಿಸಿದ ಇತರ ಪ್ರಮುಖರು. ಬಿಜೆಪಿ ಮತ್ತು ಸಂಯುಕ್ತ ಜನತಾದಳದ ಅಭ್ಯರ್ಥಿಗಳಾಗಿ ವೆಂಕಯ್ಯ ಹಾಗೂ ಶಕುಂತಲಾ ಕಣಕ್ಕಿಳಿದಿದ್ದಾರೆ.
ಜಾತ್ಯತೀತ ಜನತಾದಳದ ಬೆಂಬಲದಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಕುದುರೆ ಧಣಿ ರಾಮಸ್ವಾಮಿ, ಬುಧವಾರ ಚುನಾವಣಾಧಿಕಾರಿ ಟಿ.ರಾಜಣ್ಣ ಅವರ ಬಳಿ ನಾಮಪತ್ರ ಸಲ್ಲಿಸಿದರು. ರಾಮಸ್ವಾಮಿ ಅವರೊಂದಿಗೆ ಸಚಿವರಾದ ಎಂ.ಪಿ.ಪ್ರಕಾಶ್, ಪಿಜಿಆರ್ ಸಿಂಧ್ಯಾ, ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಎಚ್.ಡಿ.ರೇವಣ್ಣ ಜೊತೆಗಿದ್ದರು.
ಹಾದಿ ಸುಗಮ : ಬಿಜೆಪಿ ಅಧ್ಯಕ್ಷ ವೆಂಕಯ್ಯನಾಯ್ಡು ಅವರು ಸತತ 2ನೇ ಬಾರಿಗೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಬಯಸುತ್ತಿದ್ದು , ಅವರ ಹಾದಿ ಸುಗಮವಾಗಿದೆ. ಆದರೆ ಬಿಜೆಪಿ ಬೆಂಬಲಿತ ಮತ್ತೊಬ್ಬ ಅಭ್ಯರ್ಥಿ ಶಕುಂತಲಾ ಹೆಗ್ಗಡೆ ಅವರ ಗೆಲುವಿಗೆ ಇನ್ನೂ 6 ಮಂದಿ ಶಾಸಕರ ಬೆಂಬಲ ಅಗತ್ಯವಿದ್ದು , ಮುಂದಿನ ರಾಜಕೀಯ ವಿದ್ಯಮಾನಗಳು ಕುತೂಹಲ ಹುಟ್ಟಿಸಿವೆ.
ರೇಸ್ ಖ್ಯಾತಿಯ ರಾಮಸ್ವಾಮಿ ಗೆಲುವು ಕೂಡ ನಿಶ್ಚಿತವಾಗಿದೆ. ಜಾತ್ಯತೀತ ಜನತಾದಳದ 58 ಶಾಸಕರಲ್ಲಿ ರಾಮಸ್ವಾಮಿ ಅವರ ಗೆಲುವಿಗೆ ಸಾಕಾಗಿ, ಇನ್ನೂ 13 ಮತಗಳು ಉಳಿಯುತ್ತವೆ. ಈ ಮತಗಳು ಕಾಂಗ್ರೆಸ್ ಅಭ್ಯರ್ಥಿಯ ಪಾಲಾಗುವ ನಿರೀಕ್ಷೆಯಿದೆ.
ಕಾಂಗ್ರೆಸ್‌ನಿಂದ ಬಿ.ಕೆ.ಹರಿಪ್ರಸಾದ್ ಹಾಗೂ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಸ್ಪರ್ಧೆಯಲ್ಲಿದ್ದಾರೆ.
ಕಳೆದ ಚುನಾವಣೆಯಲ್ಲಿ ಮದ್ಯೋದ್ಯಮಿ ವಿಜಯ್ ಮಲ್ಯ ಅವರ ಸ್ಪರ್ಧೆಯಿಂದ ರಾಜ್ಯಸಭೆ ಚುನಾವಣೆ ಕಳೆಗಟ್ಟಿತ್ತು . ಈಗ ರಾಮಸ್ವಾಮಿ ಸರದಿ. ಅಂದಹಾಗೆ, ಮಲ್ಯ ಕೂಡ ರೇಸ್ ಪ್ರಿಯರು. ಕುದುರೆ ಮಾಲೀಕರು ಕೂಡ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications