ಎಲ್ಲಿದೆ ಕನ್ನಡ, ಎಲ್ಲೆಡೆ ಹ್ಯಾರಿಪಾಟರ್!
ಎಲ್ಲಿದೆ ಕನ್ನಡ, ಎಲ್ಲೆಡೆ ಹ್ಯಾರಿಪಾಟರ್!
ಮಾಸ್ತಿ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಬಂಡಾಯದ ಬಲ್ಲಾಳರ ನೋವು
ಇಂಗ್ಲಿಷಿನ ವಾತಾವರಣ ನಮ್ಮ ಸಮಾಜವನ್ನು ಕೃತಕವಾಗಿ ವ್ಯಾಪಿಸುತ್ತಿದೆ. ಹ್ಯಾರಿ ಪಾಟರ್ ಓದುವವರನ್ನು ನಾವಿಂದು ಕಾಣಬಹುದು, ಆದರೆ ಕನ್ನಡ ಸಾಹಿತ್ಯದ ಓದುಗರನ್ನು ಕಾಣುವುದು ದುರ್ಲಭ ಎಂದು ಬಂಡಾಯದ ಬಲ್ಲಾಳಜ್ಜ ವಿಷಾದಿಸಿದರು. ಬೆಂಗಳೂರಿನಲ್ಲಿ ಭಾನುವಾರ ಜರುಗಿದ ಸಮಾರಂಭದಲ್ಲಿ ಮಾಸ್ತಿ ಪ್ರಶಸ್ತಿ ಸ್ವೀಕರಿಸಿ ಬಲ್ಲಾಳರು ಮಾತನಾಡುತ್ತಿದ್ದರು.
ಮುಂಬಯಿ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ ಬಲ್ಲಾಳರು, ನಾನು ಹುಟ್ಟಿರುವುದು ಕರ್ನಾಟಕದಲ್ಲಾದರೂ, ಬೇರುಗಳು ಮುಂಬಯಿಯಲ್ಲಿವೆ ಎಂದರು. ಪತ್ರಕರ್ತನಾಗುವ ಉದ್ದೇಶದಿಂದ ಮುಂಬಯಿ ಸೇರಿದ್ದು , ಆ ಹಾದಿಯಲ್ಲಿ ಕೊಂಚ ದೂರ ಕ್ರಮಿಸಿದರೂ, ಕ್ರಮೇಣ ಹಾದಿ ಹೊರಳಿದ ಕುರಿತು ಬಲ್ಲಾಳರು ನೆನಪುಗಳನ್ನು ಒದ್ದೆಯಾಗಿಸಿಕೊಂಡರು. ಮುಂಬಯಿ ನನ್ನ ಜೀವನದೃಷ್ಟಿಯನ್ನು ಖಚಿತಗೊಳಿಸಿದೆ. ಒಳನೋಟಗಳನ್ನು ಹರಿತಗೊಳಿಸಿದೆ ಎಂದು ಬಲ್ಲಾಳರು ಬಣ್ಣಿಸಿದರು.
ಮಾಸ್ತಿಯವರ ಅನನ್ಯ ಸಾಹಿತ್ಯ ಸೃಷ್ಟಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಲ್ಲಾಳರು- ಮಾಸ್ತಿಯವರ ಶೈಲಿ ಸರಳವಾದುದು ನಿಜ, ಆದರೆ ಆ ಶೈಲಿ ಅನುಕರಿಸುವುದು ತುಂಬಾ ಕಷ್ಟ ಎಂದರು. ಸಂಪ್ರದಾಯವಾದಿಗಳೆಂದು ಮಾಸ್ತಿ ಹೆಸರಾಗಿದ್ದರೂ, ಅವರಲ್ಲಿ ಸುಧಾರಣಾವಾದಿಯ ಧೋರಣೆಗಳಿದ್ದವು. ಧನಾತ್ಮಕ ಬದಲಾವಣೆಯನ್ನು ಮಾಸ್ತಿ ಅಪೇಕ್ಷಿಸಿದ್ದರು ಎಂದು ವ್ಯಾಸರಾಯ ಬಲ್ಲಾಳ ಬಣ್ಣಿಸಿದರು.
ಕವಿ ಕೆ.ಎಸ್.ನಿಸಾರ್ ಅಹಮದ್, ವಿಮರ್ಶಕ ಎಚ್.ಎಸ್.ರಾಘವೇಂದ್ರ ರಾವ್, ಬೆಂಗಳೂರು ವಿವಿ ಕುಲಪತಿ ಡಾ.ಎಂ.ಎಸ್.ತಿಮ್ಮಪ್ಪ , ಮಾಸ್ತಿ ಪ್ರಶಸ್ತಿ ಸಮಿತಿ ಅಧ್ಯಕ್ಷ ಮಾವಿನಕೆರೆ ರಂಗನಾಥ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಲ್ಲಾಳರ ಅಪಾರ ಅಭಿಮಾನಿಗಳ ಹಾಜರಿಯಿಂದ ಸಮಾರಂಭದಲ್ಲಿ ಆಪ್ತತೆಯ ವಾತಾವರಣ ಸೃಷ್ಟಿಯಾಗಿತ್ತು .
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications