ಭಾಷಾ ಅಲ್ಪಸಂಖ್ಯಾತರಿಗೆ ಪ್ರಾದೇಶಿಕ ಭಾಷೆ ಕಡ್ಡಾಯ: ಸು.ಕೋರ್ಟ್
ಭಾಷಾ ಅಲ್ಪಸಂಖ್ಯಾತರಿಗೆ ಪ್ರಾದೇಶಿಕ ಭಾಷೆ ಕಡ್ಡಾಯ: ಸು.ಕೋರ್ಟ್
ಯಾವುದೇ ಭಾಷೆ ಕಲಿಕೆಯು ದೇಶದ ಏಕತೆಗೆ ಕೊಡುಗೆ
ಈ ನಿರ್ಣಯದಿಂದಾಗಿ ಯಾವುದೇ ರೀತಿಯಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವ ಅಲ್ಪಸಂಖ್ಯಾತರ ಮೂಲಭೂತ ಹಕ್ಕಿನ ಉಲ್ಲಂಘನೆ ಆಗದು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರ ಸರಕಾರದ ವಿರುದ್ಧ ಗುಜರಾತಿಗಳ ಶಿಕ್ಷಣ ಸಂಸ್ಥೆಯಾಂದು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಪೀಠವು ಮೇ 31ರ ಸೋಮವಾರ ಈ ಮಹತ್ವದ ತೀರ್ಪನ್ನು ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್.ರಾಜೇಂದ್ರ ಬಾಬು, ನ್ಯಾ। ಎ.ಆರ್.ಲಕ್ಷ್ಮಣನ್ ಮತ್ತು ನ್ಯಾ।ಜಿ.ಪಿ. ಮಾಥೂರ್ ಅವರಿದ್ದ ವಿಚಾರಣಾ ಪೀಠವು ವಿಚಾರಣೆ ನಡೆಸಿ ತೀರ್ಪು ನೀಡಿದೆ.
ಒಂದು ರಾಜ್ಯದಲ್ಲಿ ಬದುಕುತ್ತಿರುವ ಭಾಷಾ ಅಲ್ಪಸಂಖ್ಯಾತರು ಅಲ್ಲಿನ ಪ್ರಾದೇಶಿಕ ಭಾಷೆ ಕಲಿಯದಿದ್ದರೆ ಮುಖ್ಯ ವಾಹಿನಿಯಿಂದ ದೂರವಾಗುವ ಅಪಾಯವಿದೆ. ಇದು ರಾಷ್ಟ್ರದ ಏಕತೆಗೆ ಅಪಾಯ. ವಾಸ್ತವವಾಗಿ ಹೆಚ್ಚು ಹೆಚ್ಚು ಭಾಷೆ ಕಲಿಯುವುದರಿಂದ ದೇಶದ ಐಕ್ಯತೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದೆ.
ಸಂವಿಧಾನದ 29 ಮತ್ತು 30ನೇ ವಿಧಿ ಭಾಷಾ ಅಲ್ಪಸಂಖ್ಯಾತರಿಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಅಂದ ಮಾತ್ರಕ್ಕೆ ತಾವು ವಾಸಿಸುವ ಪ್ರದೇಶದ ನಿಯಮಾವಳಿಗಳಿಂದ ವಿನಾಯಿತಿ ಪಡೆದುಕೊಳ್ಳುವ ಅವಕಾಶ ನೀಡಿದಂತಾಗುವುದಿಲ್ಲ. ವಿಧಿಯನ್ನು ಋಣಾತ್ಮಕವಾಗಿ ಪರಿಗಣಿಸುವುದು ಸರಿಯಲ್ಲ ಎಂದು ತೀರ್ಪಿನಲ್ಲಿ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications