Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಕರಿ ನೆರಳು

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಕರಿ ನೆರಳು
ನೂತನ ರಾಜ್ಯ ಸರ್ಕಾರ ರಚನೆಯ ಪ್ರಕ್ರಿಯೆ ನೆನೆಗುದಿಗೆ ಬಿದ್ದಿರುವಾಗ, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳ್ಳುವ ಕುರಿತ ಆತಂಕವೊಂದು ಹೊಗೆಯಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದ ಒಂದು ಅವಲೋಕನ.

  • ಪಿ.ತ್ಯಾಗರಾಜ್‌
ಬೆಂಗಳೂರು : ಮುಖ್ಯಮಂತ್ರಿ ಗಾದಿಯ ಪ್ರತಿಷ್ಠೆಗೆ ಕಟ್ಟುಬಿದ್ದಿರುವ ಕಾಂಗ್ರೆಸ್‌ ಮತ್ತು ಜಾತ್ಯತೀತ ಜನತಾದಳ ಪರಸ್ಪರ ವಿಮುಖವಾಗಿದ್ದು , ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಛಾಯೆ ಗೋಚರಿಸಿದೆ.

ಮುಖ್ಯಮಂತ್ರಿ ಹುದ್ದೆ ತನಗೇ ಬೇಕೆಂದು ಎರಡೂ ಪಕ್ಷಗಳು ಪಟ್ಟು ಹಿಡಿದಿರುವುದರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜಾತ್ಯತೀತ ಜನತಾದಳ ಮೈತ್ರಿ ಸರಕಾರ ರಚನೆಯೇ ಅನುಮಾನವಾಗಿದೆ.

ಉಭಯ ಪಕ್ಷಗಳ ಮುಖಂಡರು ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಜಾತ್ಯತೀತ ಜನತಾದಳ ಅಧ್ಯಕ್ಷ ದೇವೇಗೌಡರ ನಡುವೆ ಮೈತ್ರಿ ಸರಕಾರ ರೂಪುರೇಷೆ ಬಗ್ಗೆ ಮಾತುಕತೆ ನಡೆಯಿತಾದರೂ ಯಾವುದೇ ತೀರ್ಮಾನ ಹೊರಬಿದ್ದಿಲ್ಲ . ಈ ಮಧ್ಯೆ ಹೊಂದಾಣಿಕೆ ಸಂಬಂಧ ಎರಡೂ ಪಾಳಯದಲ್ಲಿ ಅಪಸ್ವರ ಕಾಣಿಸಿಕೊಂಡಿದೆ.

‘ಬೇಕಿದ್ದರೆ ನಮ್ಮ ನೇತೃತ್ವದ ಸರಕಾರಕ್ಕೆ ಬೆಂಬಲ ಕೊಡಲಿ. ಇಲ್ಲದಿದ್ದರೆ ಪ್ರತಿಪಕ್ಷ ಸ್ಥಾನದಲ್ಲೇ ಕೂರುತ್ತೇವೆ’ ಎಂದು ಎರಡೂ ಪಕ್ಷಗಳ ನಾಯಕರು ಹಠ ಹಿಡಿದಿರುವುದರಿಂದ ಅತಂತ್ರ ವಿಧಾನಸಭೆ ಇದೇ ಸ್ಥಿತಿಯಲ್ಲೇ ಅಂತ್ಯಗೊಳ್ಳುವ ಸಾಧ್ಯತೆಗಳು ಇವೆ.

ರಾಜ್ಯದಲ್ಲಿ ಜನ ತಿರಸ್ಕರಿಸಿದ ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪ್ರಧಾನಿ ಪದವಿಯಿಂದ ದೂರ ಸರಿದಿದ್ದನ್ನು ಅನುಕಂಪ ಸೃಷ್ಟಿಗೆ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್‌ ಯೋಜಿಸಿದೆ. ಹೀಗಾಗಿ ಜಾತ್ಯತೀತ ದಳ ಮುಖಂಡರು ಬೆಂಬಲ ಕೊಟ್ಟರೆ ಸರಕಾರ ರಚಿಸುವುದು, ಇಲ್ಲದಿದ್ದರೆ ಸರಕಾರ ರಚನೆಯಿಂದ ದೂರ ಸರಿಯುವುದು. ಇದರಿಂದ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಜ್ಯಪಾಲರು ಆಳ್ವಿಕೆ ನಡೆಸುತ್ತಾರೆ.

ಆರು ತಿಂಗಳ ನಂತರ ಮತ್ತೆ ಚುನಾವಣೆ ನಡೆಯಲಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಇರುವುದರಿಂದ ಜನ ತಮಗೇ ಮತ ಹಾಕುತ್ತಾರೆ. ಇದರ ಜೊತೆಗೆ ಸೋನಿಯಾ ಪದತ್ಯಾಗದ ವಿಚಾರವನ್ನು ಜನರ ಮುಂದಿಟ್ಟು ಅನುಕಂಪ ಗಿಟ್ಟಿಸಬಹುದು ಎಂಬುದು ರಾಜ್ಯ ಕಾಂಗ್ರೆಸ್‌ ಮುಖಂಡರ ಲೆಕ್ಕಾಚಾರವಾಗಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದಿದ್ದರೆ ಸರಕಾರ ರಚನೆ ಯತ್ನ ಕೈಬಿಡುವ ಬಗ್ಗೆ ಕಾಂಗ್ರೆಸ್‌ ಮುಖಂಡರು ಚಿಂತನೆ ನಡೆಸಿದ್ದಾರೆ.

ಇನ್ನೊಂದೆಡೆ ಜಾತ್ಯತೀತ ಜನತಾದಳದ ನಿಲುವು ಕೂಡ ಇದೇ ಆಗಿದೆ. ರಾಜ್ಯದಲ್ಲಿ ಜನತೆಯಿಂದ ತಿರಸ್ಕೃತಗೊಂಡ ಕಾಂಗ್ರೆಸ್‌ಗೆ ಸರಕಾರ ರಚಿಸುವ ಹಕ್ಕು ಇಲ್ಲ . ಕೋಮುವಾದಿ ಬಿಜೆಪಿಯನ್ನು ದೂರ ಇಡಲು ಕಾಂಗ್ರೆಸ್‌ ತನಗೇ ಹೊರಗಿನಿಂದ ಬೆಂಬಲ ಕೊಡಬೇಕು. ಇಲ್ಲದಿದ್ದರೆ ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಸಿದ್ಧ ಎಂದು ಜಾತ್ಯತೀತ ದಳ ಮುಖಂಡರು ಪಟ್ಟು ಹಿಡಿದಿದ್ದಾರೆ.

ಒಂದೊಮ್ಮೆ ಕಾಂಗ್ರೆಸ್‌ ಬೆಂಬಲ ಕೊಡದಿದ್ದರೆ ಆರು ತಿಂಗಳ ನಂತರ ಮತ್ತೆ ಜನರ ಬಳಿಗೆ ಹೋಗುವುದು. ಕಾಂಗ್ರೆಸ್‌ನ ಅಧಿಕಾರ ದಾಹವನ್ನು ಜನತೆಯ ಮುಂದಿಟ್ಟು ಮತ ಕೇಳುವುದು. ಆಗ ಜನಾದೇಶ ತಮಗೇ ಸಿಗುತ್ತದೆ ಎಂಬುದು ದಳ ಮುಖಂಡರ ವಿಶ್ವಾಸ.

ಇನ್ನೊಂದೆಡೆ ಚುನಾವಣೆಗೆ ಮೊದಲು ಕೃಷ್ಣ ಸರಕಾರವನ್ನು ಬಾಯಿಗೆ ಬಂದಂತೆ ನಿಂದಿಸಿದ್ದ ಜಾತ್ಯತೀತ ಜನತಾದಳ ಮುಖಂಡರಿಗೆ ಈಗ ಆ ಪಕ್ಷದೊಂದಿಗೆ ರಾಜಿ ಮಾಡಿಕೊಳ್ಳಲು ನೈತಿಕತೆ ಅಡ್ಡಿಯಾಗಿದೆ. ಜಾತ್ಯತೀತ ದಳದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ, ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಕೃಷ್ಣ ಸಂಪುಟದ ಕನಿಷ್ಠ ಹತ್ತು ಸಚಿವರನ್ನು ಜೈಲಿಗೆ ಹಾಕುವುದಾಗಿ ಹೇಳಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಕೃಷ್ಣ ಹೊಸದಾಗಿ ನಿರ್ಮಾಣ ಮಾಡಿರುವ ಜೈಲಿಗೆ ದಳ ಮುಖಂಡರನ್ನು ದಬ್ಬುವುದಾಗಿ ಹೇಳಿದ್ದರು. ಇಂಥವರ ಜತೆ ಸೇರಿ ಸರಕಾರ ರಚಿಸಿದರೆ ಜನ ತಮ್ಮನ್ನೂ ಅನುಮಾನದಿಂದ ನೋಡುತ್ತಾರೆ ಎಂಬ ಅಳುಕು ಜಾತ್ಯತೀತ ದಳಕ್ಕೆ ಇದೆ. ಹೀಗಾಗಿ ಮೈತ್ರಿ ಸರಕಾರದಿಂದ ಹಿಂದೆ ಸರಿಯುವ ಬಗ್ಗೆ ಅದು ಚಿಂತನೆ ನಡೆಸಿದೆ.

ಮತ್ತೊಂದೆಡೆ ಬಿಜೆಪಿಗೆ ಕಾಂಗ್ರೆಸ್‌ ಜತೆ ಸರಕಾರ ರಚನೆ ಸಾಧ್ಯವಿಲ್ಲ . ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಜನಾದೇಶ ಹೊರಹೊಮ್ಮಿದೆ. ಹೀಗಾಗಿ ಕಾಂಗ್ರೆಸ್ಸೇತರ ಸರಕಾರ ರಚನೆಗೆ ಅತಿದೊಡ್ಡ ಪಕ್ಷವಾಗಿರುವ ತನಗೆ ದಳ ಬೆಂಬಲ ಕೊಡಬೇಕು. ಬೆಂಬಲ ಕೊಟ್ಟರೂ ಮುಖ್ಯಮಂತ್ರಿ ಗಾದಿ ಬಿಟ್ಟುಕೊಡಲಾಗದು. ದಳದ ಶಾಸಕ ಸಂಖ್ಯಾಬಲದ ಮೇಲೆ ಸಚಿವ ಸ್ಥಾನಗಳನ್ನು ಬಿಟ್ಟುಕೊಡಬಹುದು. ಅನಿವಾರ್ಯ ಎನಿಸಿದರೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬಹುದು. ಅದನ್ನು ಬಿಟ್ಟು ಬೇರೆ ಯಾವುದೇ ರಾಜಿಗೆ ಸಿದ್ಧವಿಲ್ಲ ಎಂದು ಬಿಜೆಪಿ ಮುಖಂಡರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಜನಾದೇಶ ವಿರೋಧಿ ಕಾಂಗ್ರೆಸ್‌ ಜತೆ ದಳ ಮೈತ್ರಿ ಮಾಡಿಕೊಂಡರೆ ಅದನ್ನು ತನ್ನ ಮುಂದಿನ ಹೋರಾಟಕ್ಕೆ ಅಸ್ತ್ರ ಮಾಡಿಕೊಳ್ಳಬಹುದು ಎಂಬ ಚಿಂತನೆ ಬಿಜೆಪಿಯದು. ಹೀಗಾಗಿ ರಾಜ್ಯದಲ್ಲಿ ಯಾವುದೇ ಮೈತ್ರಿಕೂಟ ಸರಕಾರ ರಚನೆ ಕಷ್ಟಸಾಧ್ಯವಾಗಿದೆ.

ಈಗ ರಾಜ್ಯಪಾಲರ ಮುಂದೆ ಎರಡು ಆಯ್ಕೆಗಳು ಉಳಿದಿವೆ. ತ್ರಿಶಂಕು ವಿಧಾನಸಭೆಗೆ ಸಾಕ್ಷಿಗಳಾಗಿರುವ ಪಕ್ಷಗಳನ್ನು ಕರೆದು, ಸರಕಾರ ರಚನೆಗೆ ಗಡುವು ವಿಧಿಸುವುದು. ಗಡುವಿನೊಳಗೆ ಸರಕಾರ ರಚನೆ ಆಗದಿದ್ದರೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವುದು. ಬಿಜೆಪಿ, ಕಾಂಗ್ರೆಸ್‌ ಮತ್ತು ದಳ ವಲಯದಲ್ಲಿ ಆಗುತ್ತಿರುವ ವಿದ್ಯಮಾನಗಳು ಇದೇ ರೀತಿ ಮುಂದುವರಿದರೆ ಎರಡನೇ ಆಯ್ಕೆ ಅನಿವಾರ್ಯ ಆಗಲಿದೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಹಕ್ಕು ಚಲಾಯಿಸಿದ ಮತದಾರನಿಗೆ ಅದೇ ಕಾಲಕ್ಕೆ ಸ್ಪಷ್ಟ ಪರ್ಯಾಯ ಶಕ್ತಿ ಕಾಣಿಸಲಿಲ್ಲ . ಕಾಂಗ್ರೆಸ್‌ ವಿರೋಧಿ ಮತಗಳು ಬಿಜೆಪಿ ಮತ್ತು ಜಾತ್ಯತೀತ ದಳದಲ್ಲಿ ಹಂಚಿ ಹೋಗಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಕುರುಕ್ಷೇತ್ರ-2004

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+