ಸೋನಿಯಾ ಮೇನಿಯಾ : ಅದಮಾರು ಶ್ರೀ ಸಹಿತ ವ್ಯಾಪಕ ವಿರೋಧ
ಸೋನಿಯಾ ಮೇನಿಯಾ : ಅದಮಾರು ಶ್ರೀ ಸಹಿತ ವ್ಯಾಪಕ ವಿರೋಧ
ವಿವಿಧ ಸಂಘಟನೆಗಳಿಂದ ಸೋನಿಯಾ ಪ್ರಧಾನಿಯಾಗುವುದರ ವಿರುದ್ಧ ಪ್ರತಿಭಟನೆ, ಹಿರಿಯೂರಲ್ಲಿ ಯುವಕನ ಆತ್ಮಹತ್ಯೆ
ಭಾರತದ ಆಡಳಿತ ಮತ್ತೊಮ್ಮೆ ವಿದೇಶೀಯರ ಕೈ ಸೇರುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿರುವ ಅದಮಾರು ಶ್ರೀಗಳು- ಅಧಿಕಾರ ಪರಕೀಯರ ಕೈ ಸೇರುವುದನ್ನು ತಡೆಯಲು ಯಾವ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ. ಸೋನಿಯಾ ಪ್ರಧಾನಿಯಾದರೆ ದೇಶ ತ್ಯಜಿಸುವುದಾಗಿ ಈ ಮುನ್ನ ಹೇಳಿದ್ದ ಶ್ರೀಗಳು, ಈಗ ತಮ್ಮ ಅಭಿಪ್ರಾಯ ಬದಲಿಸಿಕೊಂಡಿದ್ದಾರೆ.
ದೇಶ ತ್ಯಜಿಸುವುದಿಂದ ಯಾವ ಪ್ರಯೋಜನವೂ ಇಲ್ಲ . ಆ ಕಾರಣದಿಂದಾಗಿ ದೇಶದಲ್ಲಿ ಇದ್ದುಕೊಂಡೇ ಕ್ವಿಟ್ ಇಂಡಿಯಾ ಚಳವಳಿಯ ಎರಡನೇ ಭಾಗವನ್ನು ಪ್ರಾರಂಭಿಸುವುದಾಗಿ ಅದಮಾರು ಶ್ರೀಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೋನಿಯಾ ಪ್ರಧಾನಿಯಾಗುವುದರ ವಿರುದ್ಧ ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಮೇ 16ರ ಭಾನುವಾರ ಪ್ರತಿಭಟನೆ ನಡೆಸಿದ ಚಳವಳಿಕಾರರು- ಇದೊಂದು ನಾಚಿಕೆಗೇಡಿನ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ವತಂತ್ರ ರಕ್ಷಣಾ ವೇದಿಕೆ ಎನ್ನುವ ಸ್ವಯಂ ಸೇವಕ ಸಂಸ್ಥೆ ಈ ಪ್ರತಿಭಟನೆ ಏರ್ಪಡಿಸಿತ್ತು .
ಪ್ರತಿಭಟನೆಯಲ್ಲಿ ಮಟ್ಟೆಣ್ಣವರ್, ದ್ವಾರಕೀಶ್ : ಸೋನಿಯಾ ಪ್ರಧಾನಿಯಾಗುವುದನ್ನು ವಿರೋಧಿಸಿ ಅಖಿರ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಟ ದ್ವಾರಕೀಶ್ ಹಾಗೂ ಬಾಂಬ್ ಎಸ್ಸೈ ಖ್ಯಾತಿಯ ಗಿರೀಶ್ ಮಟ್ಟೆಣ್ಣವರ್ ಭಾಗವಹಿಸಿದ್ದರು. ಮಹಾತ್ಮಗಾಂಧಿ ವೃತ್ತದಲ್ಲಿ ನೆರೆದಿದ್ದ ನೂರಾರು ಪ್ರತಿಭಟನಾಕಾರರು ವಿದೇಶಿ ಮಹಿಳೆ ಪ್ರಧಾನಿ ಸ್ಥಾನಕ್ಕೇರುವ ಪ್ರಯತ್ನಕ್ಕೆ ಧಿಕ್ಕಾರ ಕೂಗಿದರು. ಈ ಪ್ರತಿಭಟನೆಯಿಂದಾಗಿ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು .
ಪ್ರಮಾಣ ವಚನ ಬಹಿಷ್ಕಾರ : ಪ್ರಧಾನಿಯಾಗಿ ಸೋನಿಯಾಗಾಂಧಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭವನ್ನು ಎನ್‌ಡಿಎ ಬಹಿಷ್ಕರಿಸುವುದಾಗಿ ಎನ್‌ಡಿಎ ಸಂಚಾಲಕ ಜಾರ್ಜ್ ಫರ್ನಾಂಡಿಸ್ ಹಾಗೂ ಬಿಜೆಪಿ ಅಧ್ಯಕ ವೆಂಕಯ್ಯನಾಯ್ಡು ಸೋಮವಾರ ತಿಳಿಸಿದರು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಎನ್‌ಡಿಎ ಮಿತ್ರಪಕ್ಷಗಳು ಭಾಗವಹಿಸುವುದಿಲ್ಲ . ಆದರೆ, ಪ್ರಧಾನಿ ವಾಜಪೇಯಿ ಸಂಪ್ರದಾಯದ ಪ್ರಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ವೆಂಕಯ್ಯನಾಯ್ಡು ಹೇಳಿದರು.
ಹಿರಿಯೂರಿನಲ್ಲಿ ಆತ್ಮಹತ್ಯೆ : ಇಟಲಿ ಮೂಲದ ಸೋನಿಯಾ ದೇಶದ ಪ್ರಧಾನಿಯಾಗುವ ವಿಷಯವನ್ನು ಅರಗಿಸಿಕೊಳ್ಳಲಾಗದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹೇಶ್ ಪ್ರಭು (30) ಎನ್ನುವ ವ್ಯಕ್ತಿ ಶನಿವಾರ (ಮೇ15) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೂರು ಕೋಟಿ ಜನಸಂಖ್ಯೆಯ ಈ ದೇಶವನ್ನು ವಿದೇಶಿ ಮೂಲದ ಮಹಿಳೆ ಆಳುವುದು, ಬ್ರಿಟೀಷರು ಮತ್ತೊಮ್ಮೆ ಆಳ್ವಿಕೆ ಮಾಡಿದ ಇತಿಹಾಸ ಪುನರಾವರ್ತನೆಗೊಂಡಂತೆ.... ಎಂದು ಮೃತ ಯುವಕ ಪತ್ರ ಬರೆದಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
(ಇನ್ಫೋ ವಾರ್ತೆ)
ಸೋನಿಯಾ (ವಿದೇಶಿ ಮಹಿಳೆ) ದೇಶದ ಪ್ರಧಾನಿ ಆಗುವ ಕುರಿತು ನಿಮ್ಮ ಅಭಿಪ್ರಾಯ ?
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications