ರಾಜ್ಯ ರಾಜಕಾರಣದಿ ಅಪ್ಪ ಮಕ್ಕಳ ಕಣ್ಣಾಮುಚ್ಚಾಲೆ ! ಲಾಭ ಯಾರಿಗೆ?
ರಾಜ್ಯ ರಾಜಕಾರಣದಿ ಅಪ್ಪ ಮಕ್ಕಳ ಕಣ್ಣಾಮುಚ್ಚಾಲೆ ! ಲಾಭ ಯಾರಿಗೆ? ಮತದಾರ ಪ್ರಭುವಿನ ಮಹತ್ವ ಸದ್ಯಕ್ಕೆ ಮುಗಿದ ಅಧ್ಯಾಯ. ಈಗ ರಾಜಕಾರಣಿಗಳ ಪಾಳಿ
ಬೆಂಗಳೂರು : ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ತಂದೆ ಮತ್ತು ಮಕ್ಕಳ ನಡುವಿನ ಜೊತೆಯಾಟವು ಉತ್ತಮ ಫಲಿತಾಂಶ ತರುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಫಲಿತಾಂಶದ ಲಾಭ ಜನರಿಗೋ ಅಥವಾ ತಂದೆ ಮತ್ತು ಮಕ್ಕಳಿಗೋ ?
ಮಾಜಿ ಪ್ರಧಾನಿ ಮತ್ತು ಜಾತ್ಯತೀತ ಜನತಾದಳದ ಅಧ್ಯಕ್ಷ ಎಚ್.ಡಿ.ದೇವೆಗೌಡ ಅವರು ಹಾಸನ ಲೋಕಸಭೆ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. ಅವರ ಮಕ್ಕಳಾದ ಎಚ್.ಡಿ. ರೇವಣ್ಣ ಹೊಳೆನರಸೀಪುರದಿಂದ ಮತ್ತು ಎಚ್.ಡಿ. ಕುಮಾರಸ್ವಾಮಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. ಗೌಡರಿಗೆ ಮುಜುಗರದ ವಿಷಯವೆಂದರೆ, ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಶ್ರೀರಾಮ್ ಎದುರಿನ ಹೀನಾಯ ಸೋಲು.
ಅಂತೆಯೇ, ಕಾಂಗ್ರೆಸ್ ಮುಖಂಡ ಆರ್.ಎಲ್. ಜಾಲಪ್ಪ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಯಾಗಿದ್ದಾರೆ. ಅವರ ಪುತ್ರ ಜೆ. ನರಸಿಂಹಸ್ವಾಮಿ ದೊಡ್ಡಬಳ್ಳಾಪುರವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.
ಎಸ್. ಎಂ. ಕೃಷ್ಣ ಅವರ ಆಡಳಿತದಲ್ಲಿ ಕಂದಾಯ ಸಚಿವರಾಗಿದ್ದ ಎಚ್.ಸಿ. ಶ್ರೀಕಂಠಯ್ಯನವರು ಹಾಸನ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಸೀಟು ಕಳೆದುಕೊಂಡಿರುವುದು ಅವರಿಗಾದ ಕಹಿ ಅನುಭವವಾಗಿದೆ. ಶ್ರೀಕಂಠಯ್ಯನವರ ಮಗ ವಿಜಯಕುಮಾರ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಯಾಸದ ಜಯಗಳಿಸಿದ್ದಾರೆ.
ಇನ್ನೊಬ್ಬ ಮಾಜಿ ಮಂತ್ರಿಗಳಾದ ಎಚ್.ಎನ್.ನಂಜೇಗೌಡ ಮತ್ತು ಮಗ ಪುರುಷೋತ್ತಮ ಅವರಿಬ್ಬರೂ ಮುಳುಗಡೆಯಾಗಿದ್ದಾರೆ. ನಂಜೇಗೌಡ ಹಾಸನ ಲೋಕಸಭಾ ಕ್ಷೇತ್ರದಲ್ಲೂ, ಮಗ ಪುರುಷೋತ್ತಮ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲೂ ಸೋತ ಕುದುರೆಯ ಸವಾರರಾಗಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದರೆ, ಅವರ ಪುತ್ರ- ಕೃಷ್ಣ ಸಂಪುಟದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನಪ್ಪಿದ್ದಾರೆ.
ಇದು ರಾಜ್ಯ ರಾಜಕಾರಣದಲ್ಲಿ ಅಪ್ಪ ಮಕ್ಕಳ ಚದುರಂಗದಾಟ. ಇನ್ನು ಶಿವಮೊಗ್ಗದ ಬಂಗಾರಪ್ಪ ಹಾಗೂ ಅವರ ಮಕ್ಕಳ ನಡುವಣ ಕಣ್ಣಾಮುಚ್ಚಾಲೆ ಎಲ್ಲರಿಗೂ ಗೊತ್ತಿರುವಂತದ್ದೇ ? ಅಂದಹಾಗೆ, ಈ ತಂದೆ ಮಕ್ಕಳ ರಾಜಕೀಯ ಚದುರಂಗದಾಟದಲ್ಲಿ ಗೆಲುವು ಯಾರಿಗೆ ಸೋಲು ಯಾರಿಗೆ ಎಂಬುದಕ್ಕಿಂತ ಯಾರೇನು ಮಾಡುವರು ಜನಪದಕೆ ಎನ್ನುವುದು ಮುಖ್ಯವಲ್ಲವೆ ?(ಇನ್ಫೋ ವಾರ್ತೆ)












Click it and Unblock the Notifications