ಜನತೆಗೆ ನನ್ನ ಮುಖ ಇಷ್ಟವಾಗಿಲ್ಲ , ಸೋಲಿನ ಹೊಣೆ ಹೊರುವೆ -ಕೃಷ್ಣ
ಜನತೆಗೆ ನನ್ನ ಮುಖ ಇಷ್ಟವಾಗಿಲ್ಲ , ಸೋಲಿನ ಹೊಣೆ ಹೊರುವೆ -ಕೃಷ್ಣ
ತಮ್ಮ ನಾಯಕತ್ವ ಹಾಗೂ ಸರ್ಕಾರದ ಯೋಜನೆಗಳು ಜನರಿಗೆ ಇಷ್ಟವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಹಾಗೂ ಸರ್ಕಾರದ ರಾಜೀನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದ ನಂತರ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮುಖಾಮುಖಿಯಾದ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ - ಜನತೆ ನೀಡಿರುವ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಹೇಳಿದರು.
ರಾಜ್ಯದ ಜನತೆ ನನ್ನ ನಾಯಕತ್ವ ಹಾಗೂ ಸರ್ಕಾರದ ಯೋಜನೆಗಳನ್ನು ತಿರಸ್ಕರಿಸಿದ್ದಾರೆ ಎಂದು ನಂಬಿದ್ದೇನೆ. ರಾಜ್ಯದ ಜನತೆಗೆ ನನ್ನ ಮುಖ ಇಷ್ಟವಾಗಿಲ್ಲ . ಆ ಕಾರಣದಿಂದಾಗಿ ಸೋಲಿನ ನೈತಿಕ ಹೊಣೆ ಹೊರುವುದಾಗಿ ಕೃಷ್ಣ ಹೇಳಿದರು. ಕೇಂದ್ರದಲ್ಲಿ ಸೋನಿಯಾ ನಾಯಕತ್ವಕ್ಕೆ ದೊರೆತ ಮನ್ನಣೆ ತಮಗೆ ಪೂರ್ಣ ಸಮಾಧಾನ ತಂದಿದೆ ಎಂದು ಕೃಷ್ಣ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಜಾತ್ಯತೀತ ಜನತಾದಳದೊಂದಿಗೆ ಕೈ ಜೋಡಿಸುತ್ತೀರಾ ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೃಷ್ಣ - ಈ ಕುರಿತು ಸದ್ಯಕ್ಕೇನೂ ಹೇಳಲಾಗದು ಎಂದರು. ಜಾತ್ಯತೀತ ಜನತಾದಳ ಅಥವಾ ಇತರ ಯಾವುದೇ ಪಕ್ಷದ ನಾಯಕರನ್ನು ಸದ್ಯಕ್ಕೆ ಭೇಟಿ ಮಾಡುವುದಿಲ್ಲ ಎಂದು ಕೃಷ್ಣ ಹೇಳಿದರು.
ಮುಖ್ಯಮಂತ್ರಿ ಕೃಷ್ಣ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ, ಅವರ ಸಂಪುಟ ಸಹೋದ್ಯೋಗಿಗಳಾದ ಕಾಗೋಡು ತಿಮ್ಮಪ್ಪ, ಮೋಟಮ್ಮ, ವಸಂತ ಸಾಲಿಯಾನ, ಡಿ.ಬಿ.ಚಂದ್ರೇಗೌಡ, ಸುಮಾ ವಸಂತ್, ಟಿ.ಬಿ.ಜಯಚಂದ್ರ, ಸಗೀರ್ ಅಹಮದ್ ಹೀನಾಯ ಸೋಲುಂಡಿರುವುದು ಕಾಂಗ್ರೆಸ್‌ನ ತೀವ್ರ ಮುಖಭಂಗಕ್ಕೆ ಕಾರಣವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications