1200 ವರ್ಷದ ಚಂದ್ರಕಲಾಪರಮೇಶ್ವರಿದೇಗುಲಕ್ಕೆಕಾಯಕಲ್ಪ ಭಾಗ್ಯ
1200 ವರ್ಷದ ಚಂದ್ರಕಲಾಪರಮೇಶ್ವರಿದೇಗುಲಕ್ಕೆಕಾಯಕಲ್ಪ ಭಾಗ್ಯ
ಗುಲ್ಬರ್ಗಾ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಕ್ಕೆ ಹೊಸ ಉಸಿರು
ಶಹಾಬಾದ್‌ಗೆ 5 ಕಿಮೀ ದೂರದಲ್ಲಿರುವ ಚಂದ್ರಕಲಾ ದೇಗುಲವನ್ನು 1200 ವರ್ಷಗಳ ಹಿಂದೆ ಚಾಲುಕ್ಯ ದೊರೆಗಳು ನಿರ್ಮಿಸಿದ್ದರು. ದೇಶದಲ್ಲಿನ ಶಕ್ತಿ ದೇವತೆಗಳ ಮೂಲ ದೇಗುಲಗಳಲ್ಲಿ ಚಂದ್ರಕಲಾ ಪರಮೇಶ್ವರಿ ದೇಗುಲವೂ ಒಂದೆಂದೂ ನಂಬಲಾಗಿದೆ. ಪ್ರಸ್ತುತ ಕೂಡ ದೇಶದ ವಿವಿಧ ಭಾಗಗಳ ಭಕ್ತರು ಶಕ್ತಿದೇವತೆಯ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದಾರೆ. ಪ್ರಸ್ತುತ, ದೇಗುಲದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನವೀಕರಿಸಲಾಗಿದೆ.
ದೇಣಿಗೆಗಳ ಮೂಲಕ ಚಂದ್ರಕಲಾ ಪರಮೇಶ್ವರಿ ದೇಗುಲದ ನವೀಕರಣ ಕಾರ್ಯ ನಡೆದಿದೆ. ಈವರೆಗೆ ಸುಮಾರು 21 ಲಕ್ಷ ರುಪಾಯಿಗಳನ್ನು ದೇಗುಲದ ನವೀಕರಣಕ್ಕೆ ಖರ್ಚು ಮಾಡಲಾಗಿದೆ. ಈ ಹಣದಲ್ಲಿ ರಾಜ್ಯ ಸರ್ಕಾರ 5 ಲಕ್ಷ ರುಪಾಯಿ ನೀಡಿದೆ. ಧರ್ಮಸ್ಥಳದ ಶ್ರೀ ಮಂಜುನಾಥ ದೇಗುಲದಿಂದ ಕೂಡ 5 ಲಕ್ಷ ರುಪಾಯಿ ದೇಣಿಗೆ ಸಂಗ್ರಹವಾಗಿದೆ. ಉಳಿದ ಹಣವನ್ನು ಭಕ್ತಾದಿಗಳಿಂದ ದೇಣಿಗೆ ಮೂಲಕ ಸಂಗ್ರಹಿಸಲಾಗಿದೆ ಎಂದು ದೇಗುಲದ ಟ್ರಸ್ಟ್‌ನ ಕಾರ್ಯದರ್ಶಿ ವಸಂತರಾವ್ ಕುಲಕರ್ಣಿ ತಿಳಿಸಿದ್ದಾರೆ.
ಸಭಾ ಮಂಟಪ, ಈಶ್ವರ ಮತ್ತು ಮಾರುತಿ ಮಂದಿರ ಹಾಗೂ ಕಾಳಿಕಾದೇವಿ ಪಾದಗಟ್ಟೆಗಳ ನವೀಕರಣ ಕಾರ್ಯ ಮುಗಿದಿದ್ದು , ಸುಣ್ಣಬಣ್ಣದ ಕಾರ್ಯ ಬಾಕಿಯಿದೆ. ಏಪ್ರಿಲ್‌ನಲ್ಲೇ ನವೀಕರಣದ ಸಂಪೂರ್ಣ ಕಾಮಗಾರಿ ಮುಕ್ತಾಯವಾಗಲಿದ್ದು , ಮೇ 9ರಂದು ದೇಗುಲದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು.
ಅಂದಹಾಗೆ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಚಂದ್ರಕಲಾ ಪರಮೇಶ್ವರಿ ದೇಗುಲದ ನವೀಕರಣ ಕಾರ್ಯ ನಡೆದಿದೆ.
ಮುಂದಿನ ದಿನಗಳಲ್ಲಿ ಯಾತ್ರಾರ್ಥಿಗಳಿಗೊಂದು ಅತಿಥಿ ಗೃಹ ಹಾಗೂ ದೇಗುಲದ ಸುತ್ತಮುತ್ತ ಉದ್ಯಾನವೊಂದನ್ನು ಅಭಿವೃದ್ಧಿಪಡಿಸಲು ದೇಗುಲದ ಟ್ರಸ್ಟ್ ಉದ್ದೇಶಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications