‘ಕನ್ನಡ ಮಾರಕ’ಸುತ್ತೋಲೆ ವಾಪಸ್ಸು ಪಡೆಯಲು ಕೃಷ್ಣಪರಮಾತ್ಮ ಸಮ್ಮತಿ
‘ಕನ್ನಡ ಮಾರಕ’ಸುತ್ತೋಲೆ ವಾಪಸ್ಸು ಪಡೆಯಲು ಕೃಷ್ಣಪರಮಾತ್ಮ ಸಮ್ಮತಿ
ಅಲ್ಪಸಂಖ್ಯಾತರಿಗೆ ಅವರ ಭಾಷೆಯಲ್ಲೇ ಸರಕಾರಿ ಆದೇಶ ಪ್ರಕಟಣೆ ರದ್ದು
ವಿವಾದಾಸ್ಪದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಮುಖ್ಯಮಂತ್ರಿ ಎಸ್ಸೆಂ. ಕೃಷ್ಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಹಿರಿಯ ಸಾಹಿತಿಗಳ ಒತ್ತಡಕ್ಕೆ ಮಣಿದು ಕೃಷ್ಣ ಈ ನಿರ್ಧಾರ ಕೈಗೊಂಡಿದ್ದಾರೆ.
ವಿರೋಧ : ಸರ್ಕಾರದ ವಿವಾದಾಸ್ಪದ ಆದೇಶವನ್ನು ವಿರೋಧಿಸಿ ಮೇ 5ರ ಮಂಗಳವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ವಾನುಮತದ ಗೊತ್ತುವಳಿಯನ್ನು ಸ್ವೀಕರಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಮಂಡಳಿಯು ಸಂವಿಧಾನದ ಚೌಕಟ್ಟಿನೊಳಗೆ ಬರುವಂತೆ ಮಾರ್ಚ್ 4ರಂದು ಹೊರಡಿಸಿದ ಆದೇಶ ಈಗ ವಿವಾದಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಜೊತೆ ಮಾತುಕತೆ ನಡೆಸಿ ನಮ್ಮ ನಿರ್ಣಯವನ್ನು ತಿಳಿಸುತ್ತೇನೆ. ಹಾಗೂ ಈ ಆದೇಶ ಅನಗತ್ಯ ಎಂಬುದನ್ನು ಮನವರಿಕೆ ಮಾಡುತ್ತೇನೆ ಎಂದು ಪ್ರಾಧಿಕಾರದ ಅಧ್ಯಕ್ಷ ಇದಿನಬ್ಬ ಹೇಳಿದರು. ಅವರು ಪ್ರಾಧಿಕಾರದ ತುರ್ತುಸಭೆಯ ಬಳಿಕ (ಮಂಗಳವಾರ) ಪತ್ರಕರ್ತರೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಆಯೋಗದ ಕಾರ್ಯದರ್ಶಿ ಕೃಷ್ಣಮೂರ್ತಿ - ಇದೊಂದು ನಿರಂತರ ಆದೇಶವಾಗಿದೆ. ಅಲ್ಪ ಸಂಖ್ಯಾತರು 15 ಶೇಕಡಾಕ್ಕಿಂತ ಹೆಚ್ಚಿದ್ದಲ್ಲಿ ಅವರಿಗೆ ಅವಕಾಶ ಕಲ್ಪಿಸುವ ಆದ್ಯತೆ ಸಂವಿಧಾನಾತ್ಮಕವಾಗಿ ಇದೆ. ಅದನ್ನು ಬಳಸಿಕೊಂಡು ರಾಜ್ಯ ಸರಕಾರ ಈ ಆದೇಶ ಹೊರಡಿಸಿದೆ. ಈ ಹಿಂದೆ 1966, 1986, 1988, 1992, 2001ರಲ್ಲಿ ಸಹ ಈ ಆದೇಶ ಹೊರಡಿಸಲಾಗಿತ್ತು ಎಂದು ವಿವರಣೆ ನೀಡಿದರು.
ಆದೇಶ ಹೊರಡಿಸುವ ಮುನ್ನ ರಾಜ್ಯ ಸರಕಾರವು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಜೊತೆ ಮಾತುಕತೆ ನಡೆಸಬೇಕಾಗಿತ್ತು. ತಮಿಳುನಾಡು, ಗುಜರಾತ್, ಆಂಧ್ರಪ್ರದೇಶಗಳಲ್ಲಿ ಈ ಸಂಪ್ರದಾಯ ಹಿಂದಿನಿಂದಲೂ ಜಾರಿಯಲ್ಲಿದೆ.
ವಿವಾದದ ಹಿನ್ನೆಲೆ...
ಸರಕಾರದ ಕಾರ್ಯಕ್ರಮಗಳಿಗೆ ಪ್ರಚಾರ ದೊರಕಿಸಿ ಕೊಡುವ ಕಾರಣದಿಂದ ಅಲ್ಪಸಂಖ್ಯಾತರಿಗೆ ಅವರ ಭಾಷೆಯಲ್ಲೇ ಅಧಿಸೂಚನೆ, ಆದೇಶ, ನಿಯಾಮವಳಿಯನ್ನು ಹೊರಡಿಸಬೇಕು. ಈ ಕುರಿತಾದ ಆದೇಶವೊಂದು ಕಳೆದ ಮಾರ್ಚ್‌ನಲ್ಲಿ ಜಾರಿಗೆ ಬಂದಿದ್ದರೂ, ಇತ್ತೀಚೆಗೆ ದಿನಪತ್ರಿಕೆಯಾಂದು ವರದಿ ಮಾಡುವವರೆಗೂ ಈ ಕುರಿತು ಹೆಚ್ಚಿನ ಮಾಹಿತಿ ಯಾರಲ್ಲಿಯೂ ಇರಲಿಲ್ಲ . ಪತ್ರಿಕಾ ವರದಿಯ ನಂತರ ಸರ್ಕಾರದ ಆದೇಶದ ಕುರಿತು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಇದೊಂದು ಕನ್ನಡಕ್ಕೆ ಸಂಚು ಬಗೆಯುವ ಆದೇಶ. ಕೂಡಲೇ ರದ್ದುಗೊಳಿಸಿ ಎಂದು ಹಿರಿಯ ಸಂಶೋಧಕ ಚಿದನಾಂದ ಮೂರ್ತಿ ಕರೆಯಿತ್ತಿದ್ದರು. ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಪತ್ರಕರ್ತರು ಮುಂತಾದವರು ತಮ್ಮ ವಿರೋಧ ವ್ಯಕ್ತ ಪಡಿಸಿದ್ದರು. ಇದು ಕನ್ನಡಕ್ಕೆ ಮಾರಕ ಎಂದು ಪಾಟೀಲ ಪುಟ್ಟಪ್ಪ ತನ್ನ ಆಕ್ರೋಶ ವ್ಯಕ್ತಪಡಿಸಿದ್ದರು. ಸರಕಾರದ ಅಂಗಣದಲ್ಲಿ ಕನ್ನಡದ ಶ್ರಾದ್ಧ ಎಂದು ಹಿರಣ್ಣಯ್ಯ ಈ ಆದೇಶವನ್ನು ವ್ಯಂಗ್ಯವಾಗಿ ವರ್ಣಿಸಿದ್ದರು.
ಆದರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅನಂತಮೂರ್ತಿ ಆದೇಶವನ್ನು ಸಮರ್ಥಿಸಿ ಕೊಂಡಿದ್ದರು. ಸಿಪಿಎಂ ಪಕ್ಷ ಮತ್ತು ಕೆಲವು ಬೆರಳೆಣಿಕೆಯಷ್ಟು ಸಂಘಟನೆಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications