ಚುನಾವಣೆ ಭಾಗ-2 : ರಾಜ್ಯದಿ ಶೇ.60, ದೇಶದಲ್ಲಿ ಶೇ.55 ಮತದಾನ
ಚುನಾವಣೆ ಭಾಗ-2 : ರಾಜ್ಯದಿ ಶೇ.60, ದೇಶದಲ್ಲಿ ಶೇ.55 ಮತದಾನ
ದೇವೇಗೌಡ-ಪುಟ್ಟಸ್ವಾಮಿ ಗೌಡರ ನಡುವೆ ಜಟಾಪಟಿ
ಎರಡನೇ ಹಂತದ ಚುನಾವಣೆಯಲ್ಲಿ ರಾಜ್ಯದ ರಾಜಕೀಯ ಘಟಾನುಘಟಿಗಳು ಮತ ಚಲಾಯಿಸಿದರು. ಹೊಳೆನರಸೀಪುರ ತಾಲೂಕಿನ ಹುಸೂರು ಗ್ರಾಮದಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಸಂಸದ ಪುಟ್ಟಸ್ವಾಮಿ ಗೌಡ ನಡುವೆ ಆರೋಪ ಪ್ರತ್ಯಾರೋಪದ ಸುರಿಮಳೆ ನಡೆಯಿತು.
ಸಂಘರ್ಷ...
ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರು, ಉಳ್ಳಾಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಜಗಳ- ಬಡಿದಾಟ ಜರಗಿದರೆ, ಬಂಟ್ವಾಳದಲ್ಲಿ ಸಚಿವ ರಮನಾಥ ರೈ ಬೆಂಬಲಿಗರೆನ್ನಲಾದ ಕಿಡಿಗೇಡಿಗಳು ದಾಂದಲೆ ನಡೆಸಿದರು.
ಮತಯಂತ್ರಕ್ಕೆ ಬೆಂಕಿ...
ಚಾಮರಾಜನಗರದ ಬನ್ನೂರಿನಲ್ಲಿ ಏಳು ಮತಯಂತ್ರಗಳನ್ನು ಉದ್ರಿಕ್ತ ಜನರ ಗುಂಪೊಂದು ಸುಟ್ಟು ಹಾಕಿದೆ. ಬೆಳಗಾವಿ ಜಿಲ್ಲೆಯ ಮಡಂಗಾವ್ ಗ್ರಾಮದಲ್ಲಿ ಮತಯಂತ್ರ ಕೈಕೊಟ್ಟ ಪರಿಣಾಮ ಮರುಮತದಾನಕ್ಕೆ ಆದೇಶಿಸಲಾಗಿದೆ. ಬನ್ನೂರು ವಿಧಾನ ಸಭಾ ಕ್ಷೇತ್ರದಲ್ಲಿ ಯಾವ ಗುಂಡಿ ಒತ್ತಿದರೂ ಅದು ಕಾಂಗ್ರಸ್‌ಗೆ ಮತ ಹೋಗುತ್ತಿದೆ ಎಂದು ಮತದಾರರು ಆರೋಪಿಸಿದರು. ಬಳಿಕ ಮತಯಂತ್ರವನ್ನು ತಂದು ಬೆಂಕಿ ಹಾಕಿದರು.
ಬಹಿಷ್ಕಾರ...
ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಶಿವಮೊಗ್ಗದ ಸೋಮಿನಕೊಪ್ಪ ನಿವಾಸಿಗಳು, ಚಾಮರಾಜನಗರ ಜಿಲ್ಲೆಯ ಹೊಂಗನವಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಘಟನೆ ನಡೆದಿದೆ. ಮಂಡ್ಯದ ಪಾಂಡವಪುರದಲ್ಲಿ ಆರಂಭದಲ್ಲಿ ಮತದಾನಕ್ಕೆ ಬಹಿಷ್ಕರಿಸಿದ ಜನರು ಬಳಿಕ ಮತದಾನ ನಡೆಸಿದರು.
ಹೆಸರು ಮಾಯ...
ಮೊದಲ ಹಂತದಲ್ಲಿ ಉದ್ಬವಿಸಿದ್ದ ಮತದಾರರ ಹೆಸರು ಮಾಯವಾದ ಘಟನೆ ಎರಡನೆ ಹಂತದಲ್ಲಿ ಕೊಂಚ ಹೆಚ್ಚಾಗಿಯೇ ತೋರಿತು. ಇದರಿಂದಾಗಿ ಗಲಭೆಗಿಳಿದ ಮಂದಿಯನ್ನು ಚದುರಿಸಲು ಕೆಲವೆಡೆ ಲಾಠಿ ಪ್ರಹಾರ ಮಾಡಲಾಯಿತು. ಕೆಲವೆಡೆ ಸತ್ತವರ ಹೆಸರು ಪಟ್ಟಿಯಲ್ಲಿ ಇನ್ನೂ ಜೀವಂತವಾಗಿದ್ದರೆ ಬದುಕಿದ ಕೆಲವರ ಹೆಸರು ಮಾತ್ರ ಇರಲಿಲ್ಲ.
ಶಾಂತಿ... ಮರುಮತದಾನ
ಮತದಾನದ ಅವಧಿ ಮುಗಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಡಿಜಿಪಿ ಮಡಿಯಾಳ್ ಸಣ್ಣ-ಸಣ್ಣ ಅಹಿತಕರ ಘಟನೆ ಹೊರತು ಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿದೆ ಎಂದು ತಿಳಿಸಿದರು.
ಮತಯಂತ್ರ ನಾಶಪಡಿಸಿದ ಕಡೆಗಳಲ್ಲಿ ಮತ್ತು ಗಲಭೆ ನಡೆದ ಸೂಕ್ಷ್ಮ ಪ್ರದೇಶದಲ್ಲಿ ಬುಧವಾರ ಮರುಮತದಾನಕ್ಕೆ ಆದೇಶಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅಭಿಜಿತ್ ದಾಸ್ ಗುಪ್ತಾ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications