ಚುನಾವಣೆ ಅಧಿಕಾರಿಗಳಿಗೆ ದುಃಸ್ವಪ್ನ, ತಮಿಳ್ನಾಡಿನ ‘ಚಿಲ್ಲರೆ ಚಿತ್ತರಂಜನ’
ಚುನಾವಣೆ ಅಧಿಕಾರಿಗಳಿಗೆ ದುಃಸ್ವಪ್ನ, ತಮಿಳ್ನಾಡಿನ ‘ಚಿಲ್ಲರೆ ಚಿತ್ತರಂಜನ’
ಚುನಾವಣಾ ಠೇವಣಿಯಾಗಿ ಪುಡಿಗಾಸು ನೀಡುವ ‘ಚಿಲ್ಲರೆ ಭೂಪ’
ತಮಿಳುನಾಡಿನ ಕಾಂಚೀಪುರದ ಗುರು ಸ್ವಾಮಿ ದೇವಳದ ಎದುರು ತೆಂಗಿನಕಾಯಿ ಮಾರುವ ಚಿತ್ತರಂಜನ್ ಸಣ್ಣ ವ್ಯಾಪಾರಸ್ಥ. ಆತನಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಚಪಲ. ಗೆಲ್ಲಲೇಬೇಕೆಂದೇನೂ ಇಲ್ಲ. ತನ್ನ ವ್ಯಾಪಾರದಲ್ಲಿ ಬಂದ ಚಿಲ್ಲರೆ ಕಾಸನ್ನು (ಕೊನೆ ಕ್ಷಣದಲ್ಲಿ ) ಠೇವಣಿಯಾಗಿ ಸಲ್ಲಿಸುವ ಮೂಲಕ ‘ಚಿಲ್ಲರೆ ಚಿತ್ತರಂಜನ್’ ಎಂದೇ ಖ್ಯಾತಿ ಪಡೆದಿದ್ದಾನೆ.
ಈ ಪುಡಿಗಾಸು ಅಭ್ಯರ್ಥಿ 1991ರಲ್ಲಿ ಇಲ್ಲಿಯ 4 ವಿಧಾನಸಭೆ ಮತ್ತು 2 ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಿದ್ದ. ಆಗ ತೆರಸ ಬೇಕಾಗಿದ್ದ ಠೇವಣಿ ರೂ. 250 (ಎಂಎಲ್‌ಎ) ಮತ್ತು ರೂ. 500 (ಎಂಪಿ.) ಆದರೆ 1996ರಲ್ಲಿ ರೂ.5000-ಎಂಎಲ್‌ಎ ಮತ್ತು ರೂ.10000-ಎಂಪಿ ಸ್ಥಾನಕ್ಕೆ ಠೇವಣಿ ಆದಾಗಲೂ ಈತ ಒಂದೊಂದು ಸ್ಥಾನಕ್ಕೆ ಸ್ಪರ್ಧಿಸಿದ್ದ.
1999ರಲ್ಲಿ ಚಿತ್ತರಂಜನ ಕೊನೆಗಳಿಗೆಯಲ್ಲಿ ನಾಮಪತ್ರ ಸಲ್ಲಿಸಲು ತೆರಳಿದ್ದ. ಆದರೆ ಆತನ ಜೋಳಿಗೆಯ ಚಿಲ್ಲರೆ ಠೇವಣಿ ದರಕ್ಕಿಂತ ಕಡಿಮೆ ಇದ್ದಿತ್ತು. ಕಡೇ ಕ್ಷಣದಲ್ಲಿ ಚಿಲ್ಲರೆ ಲೆಕ್ಕ ಮಾಡಿ ಸುಸ್ತಾದ ಅಧಿಕಾರಿಗಳು ಚಿಲ್ಲರೆ ಕಡಿಮೆಯಾಗಿದೆ ಎಂದು ಅವನ ಅರ್ಜಿಯನ್ನು ಅನೂರ್ಜಿತಗೊಳಿಸಿದ್ದರು. ಈ ಬಾರಿ ಮತ್ತೆ ಕಣದಲ್ಲಿದ್ದಾನೆ.
ಅಧಿಕಾರಿಗಳಿಗೆ ಕಗ್ಗಂಟಾಗಿರುವ ‘ಚಿಲ್ಲರೆ ಚಿತ್ತರಂಜನ್’ ಮಾತ್ರ ಅದೃಷ್ಟಶಾಲಿ! ಯಾಕೆ ಗೊತ್ತಾ? ಈತನಿಗೆ ಚಿಲ್ಲರೆಯನ್ನು ಮತ್ತೆ ಲೆಕ್ಕ ಮಾಡುವ ಪರಿಸ್ಥಿತಿ ಒದಗಿಬರಲಿಲ್ಲ. ಈತ ಯಾವತ್ತು ಠೇವಣಿಯನ್ನು ಉಳಿಸಿ ಕೊಂಡಿಲ್ಲ.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications