ಚಾಮರಾಜಪೇಟೆಯಲ್ಲಿ ಕೃಷ್ಣಲೀಲೆ? ಚುನಾವಣೆ ರದ್ದಿಗೆ ಒಕ್ಕೊರಲು !
ಚಾಮರಾಜಪೇಟೆಯಲ್ಲಿ ಕೃಷ್ಣಲೀಲೆ? ಚುನಾವಣೆ ರದ್ದಿಗೆ ಒಕ್ಕೊರಲು !
ಮತಗಟ್ಟೆಯಲ್ಲಿ ಅಮಾನತುಗೊಂಡ ಅಧಿಕಾರಿ! ಕೃಷ್ಣ ಕೃಷ್ಣ !
ಬಿಜೆಪಿಯ ಪ್ರಮೀಳಾ ನೇಸರ್ಗಿ ಅವರ ನಾಮಪತ್ರ ತಿರಸ್ಕಾರ ಪ್ರಕರಣದಲ್ಲಿ ಚುನಾವಣಾ ಆಯೋಗದಿಂದ ಅಮಾನತುಗೊಂಡಿದ್ದ ನೀಲಕಂಠಪ್ಪ, ಮತದಾನದ ಸಂದರ್ಭದಲ್ಲಿ ಸ್ಥಳೀಯ ಮತಗಟ್ಟೆಯಾಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಚುನಾವಣೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿವೆ.
ಇತ್ತೀಚೆಗೆ ಆಯೋಗದಿಂದ ಅಮಾನತುಗೊಂಡ ಅಧಿಕಾರಿ ಮತ್ತೆ ಕಾರ್ಯನಿರ್ವಹಿಸಿದ್ದಾದರೂ ಹೇಗೆ ? ಇಂಥ ಸಂದರ್ಭದಲ್ಲಿ ಚುನಾವಣೆಯನ್ನು ರದ್ದುಗೊಳಿಸುವುದರ ವಿನಃ ಬೇರೆ ದಾರಿಯೇ ಇಲ್ಲ ಎಂದು ಜೆಡಿಎಸ್ ಹುರಿಯಾಳು ಅನಂತನಾಗ್ ಹೇಳಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿಯವರಿಂದ ಭಾರೀ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಆಭ್ಯರ್ಥಿ ಮುಖ್ಯಮಂತ್ರಿಚಂದ್ರು ಆರೋಪಿಸಿದರು.
ಇದೆಲ್ಲ ಕೃಷ್ಣರ ಪಿತೂರಿ : ಅಮಾನತುಗೊಂಡಿದ್ದ ಅಧಿಕಾರಿ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿರುವುದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣರ ಪಿತೂರಿ ಎಂದು ಬಿಜೆಪಿ ನಾಯಕಿ ಪ್ರಮೀಳಾ ನೇಸರ್ಗಿ ಆಪಾದಿಸಿದ್ದಾರೆ. ನಾನು ಮತಗಟ್ಟೆಗೆ ಹೋದಾಗ ಅಲ್ಲಿ ನೀಲಕಂಠಪ್ಪ ಕಾರ್ಯ ನಿರ್ವಹಿಸುತ್ತಿದ್ದ . ನನ್ನನ್ನು ನೋಡಿದ ತಕ್ಷಣ ಆತ ಸ್ಥಳದಿಂದ ಓಡಿದ. ಅಮಾನತುಗೊಂಡ ಅಧಿಕಾರಿಗೆ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲು ಧೈರ್ಯವಾದರೂ ಎಲ್ಲಿ ಬರಬೇಕು ? ಇದೆಲ್ಲಾ ಮುಖ್ಯಮಂತ್ರಿ ಕೃಷ್ಣರ ಪಿತೂರಿ. ಅವರೇ ಈ ಕಾರ್ಯವನ್ನು ಮಾಡಿಸಿದ್ದಾರೆ ಎಂದು ಪ್ರಮಿಳಾ ನೇಸರ್ಗಿ ಆಕ್ರೋಶ ವ್ಯಕ್ತ ಪಡಿಸಿದರು.
ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರವು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸ್ಪರ್ಧೆಯಿಂದ ರಾಷ್ಟ್ರದ ಗಮನ ಸೆಳೆದಿದೆ. ಆದರೆ ಕೃಷ್ಣರಿಗೆ ಪ್ರಬಲ ಪ್ರತಿಸ್ಪರ್ಧಿ ಎಂದು ಭಾವಿಸಲಾಗಿದ್ದ ಬಿಜೆಪಿಯ ಅಧಿಕೃತ ಆಭ್ಯರ್ಥಿ ಪ್ರಮಿಳಾ ನೇಸರ್ಗಿ ನಾಮಪತ್ರ ತಿರಸ್ಕೃತಗೊಂಡಿತು. ಇದು ರಾಜಕೀಯ ವಲಯದಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ನೇಸರ್ಗಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು , ಈ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಕ್ಷೇತ್ರದ ಮುಖ್ಯ ಚುನಾವಣಾಧಿಕಾರಿ ನೀಲಕಂಠಪ್ಪರನ್ನು ಅಮಾನತು ಮಾಡಿತ್ತು.
ಮತಯಂತ್ರ ರಸ್ತೆಗೆ : ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕೋಟೆ ಮೈದಾನ ಮತಗಟ್ಟೆಯಲ್ಲಿ ಕೆಲವು ದುಷ್ಕರ್ಮಿಗಳು ಮತದಾನ ಯಂತ್ರವನ್ನು ರಸ್ತೆಗೆ ಎಸೆದ ಘಟನೆ ವರದಿಯಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications