ಚುನಾವಣೇಲಿ ಭಸ್ಮಾಸುರರು ! ವೋಟು ಚಲಾಯಿಸುವಾಗ ಹುಷಾರು
ಚುನಾವಣೇಲಿ ಭಸ್ಮಾಸುರರು ! ವೋಟು ಚಲಾಯಿಸುವಾಗ ಹುಷಾರು
ವಿಧಾನಸಭೆ ಚುನಾವಣೆಯಲ್ಲಿ 120 ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು
ರಾ-ರಾವಣ
ಜ-ಜರಾಸಂಧ
ಕೀ-ಕೀಚಕ
ಯ-ಯಮರಂಥ ‘ದುರುಳರ ಸಂತೆ ’ ಎಂಬ ವಿವರಣೆ ಹಳತಾಗಿದೆ. ಆದರೂ ರಾಜಕೀಯ ರಂಗ ಮಾತ್ರ ಹಿಂದಿನಿಂದ ಇಂದಿನವರೆಗೂ, ಮುಂದೂ ಒಂದೇ ತೆರನಾದ ಸ್ವಭಾವದಿಂದಲೇ ಮೊಳೆತು, ಬೆಳೆದು ನಳನಳಿಸುತ್ತಿದೆ.
ವಿಧಾನಸಭಾ ಮೊದಲ ಹಂತದ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯುಳ್ಳ 120 ಅಭ್ಯರ್ಥಿಗಳು ಕಣದಲ್ಲಿದ್ದು, ದೆಹಲಿ, ಗುಜರಾತ್ ಹಾಗೂ ರಾಜಸ್ಥಾನ್ ಗಳನ್ನು ಕರ್ನಾಟಕ ರಾಜ್ಯ ಈ ವಿಷಯದಲ್ಲಿ ಮೀರಿಸಿದೆ.
‘ರಾ’ ಷ್ಟ್ರ ಭಕ್ಷಣೆಯೇ
‘ಜ’ ನ್ಮಸಿದ್ಧಹಕ್ಕು ಎಂಬ
‘ಕೀ’ ಳರಿಮೆಯ, ತುಚ್ಛ
‘ಯ’ ಕಃಶ್ಚಿತ್ ಸಿದ್ಧಾಂತದ ಪ್ರತಿಪಾದಕರಂತೆ ಈ ವಿಧಾನಸಭಾ ಚುನಾವಣೆಯ ಬಹುತೇಕ ಅಭ್ಯರ್ಥಿಗಳು ನಮಗೆ ಗೋಚರಿಸುತ್ತಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು ಕೊಲೆ ಪ್ರಕರಣದಲ್ಲಿ , 8 ಅಭ್ಯರ್ಥಿಗಳು ಕೊಲೆ ಯತ್ನದಲ್ಲಿ, 17 ಅಭ್ಯರ್ಥಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪ್ರಕರಣಗಳಲ್ಲಿ, 20 ಅಭ್ಯರ್ಥಿಗಳು ಪ್ರಾಣಬೆದರಿಕೆ ಆರೋಪದಲ್ಲಿ ಹಾಗೂ 55 ಮಂದಿ ಹಿಂಸಾತ್ಮಕ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ.
ಕೊಲೆ ಉದ್ದೇಶದಿಂದ ಅಪಹರಣ, ಬೆಂಕಿ ಮತ್ತು ಸಿಡಿಮದ್ದು ಸ್ಫೋಟಿಸಿ ಆಸ್ತಿ ಹಾನಿ, ಧರ್ಮ ನಿಂದನೆ, ಮಾರಕಾಸ್ತ್ರಗಳ ಬಳಕೆ ಮಾಡಿ ಗಲಭೆ, ನಕಲು ಇತ್ಯಾದಿ ಪ್ರಕರಣಗಳಲ್ಲಿ ಶಾಮೀಲಾದವರು ಅನೇಕರಿದ್ದಾರೆ.
ಕರ್ನಾಟಕ ಚುನಾವಣಾ ಕಾವಲು ಸಮಿತಿ(ಕೆ.ಇ.ಡಬ್ಲ್ಯೂ.) ಏಪ್ರಿಲ್ 15 ರಂದು ಈ ಆಪಾದಿತರ ವರದಿಯನ್ನು ಬಿಡುಗಡೆ ಮಾಡಿದ್ದು, ವಿಧಾನಸಭೆಯಲ್ಲಿ ಸ್ಪ್ಪರ್ಧಿಸಿರುವ ಅಭ್ಯರ್ಥಿಗಳಿಗಿಂತ ಲೋಕಸಭಾ ಚುನಾವಣೆಯಲ್ಲಿ
ಸ್ಪರ್ಧಿಸಿರುವ ಅಭ್ಯರ್ಥಿಗಳು ಕಡಿಮೆ ಸಂಖ್ಯೆಯಲ್ಲಿ ಕಳಂಕಿತರಾಗಿರುವುದು ಕಂಡು ಬಂದಿದೆ. ಮೊದಲ ಹಂತದ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲಿ 9 ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ.
ಈ ವರದಿ ಬಿಡುಗಡೆ ಮಾಡಿದ ಕೆಇಡಬ್ಲ್ಯೂ ನಿರ್ವಾಹಕ ಡಾ. ತ್ರಿಲೋಚನ್ ಶಾಸ್ತ್ರಿ ಅವರು - ಚುನಾವಣಾಧಿಕಾರಿಗೆ ಪ್ರಮಾಣಪತ್ರ ಸಲ್ಲಿಸುವಾಗ 200ಕ್ಕೂ ಹೆಚ್ಚು ಅಭ್ಯರ್ಥಿಗಳು ‘ಅಸ್ತಿವಿವರ’ ಸ್ಥಳದಲ್ಲಿ ‘ಏನೂ ಇಲ್ಲ’ ಎಂದು ಬರೆದಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಯಥಾ ರಾಜಾ ತಥಾ ಪ್ರಜಾ’ ಎಂಬ ವಾಕ್ಯದ ಅರ್ಥವನ್ನು ಮನಗಂಡು ಮತದಾರರು ತಮ್ಮ ಮತ ಚಲಾಯಿಸಬೇಕೆ? ಅಥವಾ ನಿಂತ ಅಭ್ಯರ್ಥಿಗಳಲ್ಲಿ ಈವರೆವಿಗೆ ‘ಅತಿ ಕಡಿಮೆ’ ಕೊಲೆ, ಸುಲಿಗೆ ಮಾಡಿದವರನ್ನು ಆರಿಸಿ ಚುನಾಯಿಸಬೇಕೆ? ನೀವೇ ಹೇಳಿ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications