ಬಿಜೆಪಿ ವಿರುದ್ಧ ವಾಗ್ದಾಳಿ ; ದೇವೇಗೌಡ ಪರ ಪ್ರಚಾರಕ್ಕೆ ವಿ.ಪಿ.ಸಿಂಗ್
ಬಿಜೆಪಿ ವಿರುದ್ಧ ವಾಗ್ದಾಳಿ ; ದೇವೇಗೌಡ ಪರ ಪ್ರಚಾರಕ್ಕೆ ವಿ.ಪಿ.ಸಿಂಗ್
ಸೋನಿಯಾ ವಿದೇಶಿ ಮೂಲದ ಟೀಕೆ ಅತಾರ್ಕಿಕ
ಸೋನಿಯಾ ಅವರ ವಿದೇಶಿ ಮೂಲದ ಬಗೆಗಿನ ಟೀಕೆಗಳು ಅರ್ಥಹೀನ. ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸದಂತೆ ಸೋನಿಯಾ ಅವರನ್ನು ನಿರ್ಬಂಧಿಸುವ ವಿಷಯ ಕೂಡ ಅತಾರ್ಕಿಕ ಎಂದು ವಿ.ಪಿ.ಸಿಂಗ್ ಹೇಳಿದರು. ಅವರು ಏ.15ರ ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ನೈಜ ನಾಗರಿಕರು ಹಾಗೂ ಸಂದೇಹಾಸ್ಪದ ನಾಗರಿಕರು ಎಂದು ವರ್ಗೀಕರಿಸುವುದು ಸಾಧ್ಯವಿಲ್ಲ . ಭಾರತದ ನಾಗರಿಕರು ಯಾರು ಬೇಕಾದರೂ ಅತ್ಯುನ್ನತ ಹುದ್ದೆಗಳನ್ನು ಹೊಂದಬಹುದು. ಪ್ರಧಾನಿ ಹುದ್ದೆ ಭಾರತೀಯ ಪೌರತ್ವಕ್ಕಿಂಥ ದೊಡ್ಡದೇನೂ ಅಲ್ಲ ಎಂದು ವಿ.ಪಿ.ಸಿಂಗ್ ಹೇಳಿದರು.
ವಿದೇಶಿ ಮೂಲದ ವ್ಯಕ್ತಿಯ ದೇಶಭಕ್ತಿ ಸಂದೇಹಾಸ್ಪದವಾಗಿದ್ದಾಗ, ಅಥವಾ ಆ ವ್ಯಕ್ತಿಯಿಂದ ದೇಶಕ್ಕೆ ಆತಂಕವಿದೆ ಎಂದಾದಲ್ಲಿ ಪೌರತ್ವ ನೀಡಿದ್ದಾದರೂ ಏಕೆ ಎಂದು ಸಿಂಗ್ ತರ್ಕ ಮಂಡಿಸಿದರು.
ಯಾರು ಯಾರೊಂದಿಗಿರುತ್ತಾರೆ ಎನ್ನುವುದನ್ನು ಹೇಳಲಿಕ್ಕಾಗುತ್ತಿಲ್ಲ . ಆದರೆ, ಲೋಕಸಭೆಯಲ್ಲಿ ಬಿಜೆಪಿಯ ಬಲ ಹೆಚ್ಚಂತೂ ಆಗುವುದಿಲ್ಲ . ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ಕಳಕೊಳ್ಳುವುದನ್ನು ತುಂಬಿಕೊಳ್ಳುವುದು ಸುಲಭವಲ್ಲ ಎಂದು ಚುನಾವಣಾ ಪೂರ್ವ ಪರಿಸ್ಥಿತಿಯನ್ನು ವಿ.ಪಿ.ಸಿಂಗ್ ವಿಶ್ಲೇಷಿಸಿದರು.
ಬಿಜೆಪಿ ಕ್ಷಮೆ ಕೇಳಲಿ
ಅಯೋಧ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯನ್ನು ಮಾಜಿ ಪ್ರಧಾನಿ ತೀವ್ರವಾಗಿ ಟೀಕಿಸಿದರು. ಮಾತುಕತೆ ಅಥವಾ ನ್ಯಾಯಾಲಯದ ಮಧ್ಯಸ್ಥಿಕೆಯ ಮೂಲಕವೇ ಅಯೋಧ್ಯೆ ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕು ಎನ್ನುವ ಇಂದಿನ ನಿಲುವನ್ನು ಬಿಜೆಪಿ 15 ವರ್ಷಗಳ ಹಿಂದೆಯೇ ಹೊಂದಿದ್ದಲ್ಲಿ , ದೇಶ ದಹಿಸುವುದನ್ನು ತಪ್ಪಿಸಬಹುದಿತ್ತು . ಈ ಪ್ರಮಾದಕ್ಕಾಗಿ ಹಾಗೂ ಈವರೆಗಿನ ಜೀವಹಾನಿಗಾಗಿ ಬಿಜೆಪಿ ಕ್ಷಮೆ ಯಾಚಿಸಬೇಕು ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿ ಹೊರತಾದ ತೃತೀಯರಂಗದ ಅವಶ್ಯಕತೆ ದೇಶಕ್ಕೆ ತುಂಬಾ ಇದೆ ಎಂದು ವಿ.ಪಿ.ಸಿಂಗ್ ಹೇಳಿದರು. ಆದರೆ, ಇಂಥದೊಂದು ಶಕ್ತಿಯ ಒಗ್ಗೂಡಿಸುವಿಕೆಯ ನಾಯಕತ್ವವನ್ನು ಅನಾರೋಗ್ಯದ ಕಾರಣ ತಮ್ಮಿಂದ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. (ಅನಾರೋಗ್ಯದಿಂದ ಬಳಲುತ್ತಿರುವ ವಿ.ಪಿ.ಸಿಂಗ್ ಡಯಾಲಿಸಿಸ್ ಹಾಗೂ ಕೀಮೊಥೆರಪಿಗೆ ಒಳಗಾಗುತ್ತಿದ್ದಾರೆ).
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ವಿ.ಪಿ.ಸಿಂಗ್- ರೈತರು, ಕಾರ್ಮಿಕರು ಹಾಗೂ ಅಶಕ್ತ ವರ್ಗಗಳ ಹಿತಾಸಕ್ತಿಗಾಗಿ ದೇವೇಗೌಡರು ಸಂಸತ್ತಿನಲ್ಲಿರಬೇಕು ಎಂದರು. ದೇವೇಗೌಡರು ಯಾವುದೇ ಸಂದರ್ಭದಲ್ಲೂ ಬಿಜೆಪಿಯಾಂದಿಗೆ ಕೈಗೂಡಿಸುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications