ಪ್ರಗತಿಗಾಗಿ ಬಿಜೆಪಿಗೆ ವೋಟು ; ಬೆಳಗಾವಿ/ ಬೆಂಗಳೂರಲ್ಲಿ ಅಟಲ್
ಪ್ರಗತಿಗಾಗಿ ಬಿಜೆಪಿಗೆ ವೋಟು ; ಬೆಳಗಾವಿ/ ಬೆಂಗಳೂರಲ್ಲಿ ಅಟಲ್
ಪ್ರಾದೇಶಿಕ ಅಸಮಾನತೆ ನಿವಾರಣೆ, ಮೆಟ್ರೋ ರೈಲು, ನದಿ ಜೋಡಣೆ...
ಪಕ್ಷದ ಚುನಾವಣಾ ಪ್ರಚಾರದ ಅಂಗವಾಗಿ ಏ.13ರ ಮಂಗಳವಾರ ರಾಜ್ಯ ಪ್ರವಾಸ ಕೈಗೊಂಡಿದ್ದ ಪ್ರಧಾನಿ ವಾಜಪೇಯಿ, ಬೆಳಗಾವಿ ಹಾಗೂ ಬೆಂಗಳೂರುಗಳಲ್ಲಿ ಭಾರೀ ಬಹಿರಂಗ ಸಭೆಗಳನ್ನುದ್ದೇಶಿಸಿ ಮಾತನಾಡಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಆದ್ಯತೆ ನೀಡಲಾಗುತ್ತಿದೆ. ಇದೇ ರೀತಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಲ್ಲಿ ಉತ್ತರಕರ್ನಾಟಕ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜನಮೇಳವನ್ನು ಉದ್ದೇಶಿಸಿ ಪ್ರಧಾನಿ ನುಡಿದರು.
ರಸ್ತೆಯ ವಿಷಯದಲ್ಲಿ ದೇಶದಲ್ಲಿ ಕ್ರಾಂತಿಯಾಗಿದೆ. ಜಾಗತಿಕ ಪೈಪೋಟಿ ನೀಡುವಂಥ ರಸ್ತೆಗಳನ್ನು ನಿರ್ಮಿಸಲಾಗಿದೆ. ಇಷ್ಟೇ ಅಲ್ಲದೆ, ಕೃಷಿ ಕ್ಷೇತ್ರದಲ್ಲೂ ಭಾರತ ಪ್ರಕಾಶಿಸುತ್ತಿದೆ. ರೈತನ ಕೈಗೆ ಫೋನ್ ಕೊಟ್ಟಿದ್ದೇವೆ. ರೈತರು ಎಣ್ಣೆಕಾಳುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಮೂಲಕ ಹಸಿರುಕ್ರಾಂತಿಯ ಸರ್ಕಾರದ ಸಂಕಲ್ಪದೊಂದಿಗೆ ಕೈಗೂಡಿಸಬೇಕು ಎಂದು ವಾಜಪೇಯಿ ಕರೆ ನೀಡಿದರು.
ಗಂಗಾ-ಕಾವೇರಿ ಸಂಗಮ : ದೇಶದಲ್ಲಿನ ಬರಗಾಲದ ಸಮಸ್ಯೆಗೆ ಗಂಗಾ-ಕಾವೇರಿ ಜೋಡಣೆಯಾಂದೇ ಮಾರ್ಗವಾಗಿದ್ದು , ನದಿ ಜೋಡಣೆಗೆ ನಾವು ಬದ್ಧರಾಗಿದ್ದೇವೆ ಎಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪ್ರಧಾನಿ ವಾಜಪೇಯಿ ಘೋಷಿಸಿದರು.
ನದಿ ಜೋಡಣೆಯ ನೀಲನಕ್ಷೆ ಸಿದ್ಧವಾಗಿದೆ. ಯೋಜನೆ ಅನುಷ್ಠಾನದಿಂದ ಕೃಷಿಗೆ ಮಾತ್ರವಲ್ಲದೆ, ವಿದ್ಯುತ್ ಬರಗಾಲಕ್ಕೂ ಮದ್ದು ದೊರೆಯಲಿದೆ ಎಂದು ವಾಜಪೇಯಿ ಹೇಳಿದರು.
ವಿದೇಶಿಗರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುತ್ತಿರುವ ಕರ್ನಾಟಕಕ್ಕೆ ಮೆಟ್ರೋ ರೈಲು ಅಗತ್ಯವಾಗಿದೆ. ಅನೇಕ ಮೂಲಭೂತ ಸೌಕರ್ಯಗಳು ಉತ್ತಮವಾಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ಎನ್‌ಡಿಎ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಮತದಾರರನ್ನು ವಾಜಪೇಯಿ ಕೋರಿದರು.
ಗುಜರಾತ್ ಹೊರತುಪಡಿಸಿ ದೇಶದ ಬೇರೆಡೆ ಎಲ್ಲೆಯೂ ಕೋಮುಗಲಭೆ ನಡೆದಿಲ್ಲ . ನೆರೆಯ ಪಾಕಿಸ್ತಾನದೊಂದಿಗೂ ಸಂಬಂಧ ಸುಧಾರಿಸುತ್ತಿದೆ. ಆದರೆ ಕಾಂಗ್ರೆಸ್ ಎನ್‌ಡಿಎ ವಿರುದ್ಧ ಸುಳ್ಳು ಪ್ರಚಾರದಲ್ಲಿ ತೊಡಗಿದೆ ಎಂದು ವಾಜಪೇಯಿ ಆಪಾದಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications