ಸಮಾಜಮುಖಿ ಶಿಖರಗಾಮಿಗಳಿಗೆ ಏ.15 ರಂದು ‘ಆರ್ಯಭಟ’ ಗರಿ
ಸಮಾಜಮುಖಿ ಶಿಖರಗಾಮಿಗಳಿಗೆ ಏ.15 ರಂದು ‘ಆರ್ಯಭಟ’ ಗರಿ
ದಟ್ಸ್‌ಕನ್ನಡ.ಕಾಂ ಸಂಪಾದಕ ಶಾಮಸುಂದರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಕಿರುತೆರೆ ಶ್ರೇಷ್ಠರಿಗೆ ಪ್ರಶಸ್ತಿ-ಗೌರವ.
ಕಬೀರ್‌ಸಮ್ಮಾನ್ ಪ್ರಶಸ್ತಿ ವಿಜೇತ ಕವಿ ಡಾ.ಚಂದ್ರಶೇಖರ ಕಂಬಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸುವರು. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಮಣಶ್ರೀ ಹೋಟೆಲ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಷಡಕ್ಷರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ನೆನಪಿನ ಸಂಚಿಕೆ ಬಿಡುಗಡೆ ಮಾಡುವರು.
ಏಪ್ರಿಲ್ 15ರಂದು ನಡೆಯುವ ಸಮಾರಂಭ ಆರ್ಯಭಟ ಸಂಸ್ಥೆಯ ಪ್ರಶಸ್ತಿಗಳ 29ನೇ ವಾರ್ಷಿಕ ಸಮಾರಂಭವಾಗಿದ್ದು , ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ಹಾಗೂ ಕಿರುತೆರೆಯ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದೇ ಕಾರ್ಯಕ್ರಮದಲ್ಲಿ ದಕ್ಷಿಣಭಾರತದ ಜನಪ್ರಿಯ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಕಾರ್ಯದರ್ಶಿ ಹೆಚ್.ಎಲ್.ಎನ್.ರಾವ್ ತಿಳಿಸಿದ್ದಾರೆ.
ಶಾಮ್‌ಗೆ ಪ್ರಶಸ್ತಿ : ಅಂತರ್ಜಾಲದಲ್ಲಿ ಕನ್ನಡದ ಯಶಸ್ವಿ ಕೃಷಿ ನಡೆಸಿರುವ http://www.thatskannada.com ಸಂಪಾದಕ ಎಸ್.ಕೆ.ಶಾಮಸುಂದರ ಅವರಿಗೆ 2003ನೇ ಸಾಲಿನ ಆರ್ಯಭಟ ಪ್ರಶಸ್ತಿಯನ್ನು ಏ.15ರ ಸಮಾರಂಭದಲ್ಲಿ ನೀಡಲಾಗುವುದು. ಡಾ.ಎಂ.ಎಸ್.ತಿಮ್ಮಪ್ಪ, ಎಸ್.ವಿ.ಜಯಶೀಲರಾವ್, ಮಿಮಿಕ್ರಿ ದಯಾನಂದ, ಮಾರ್ಕಂಡಪುರಂ ಶ್ರೀನಿವಾಸ್ ಪ್ರಶಸ್ತಿ ವಿಜೇತರಲ್ಲಿ ಸೇರಿದ್ದಾರೆ.
ಈಟೀವಿಗೆ ಪ್ರಶಸ್ತಿ : ಅತ್ಯುತ್ತಮ ಕನ್ನಡ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿರುವ ಈಟೀವಿ ಕನ್ನಡ ವಾಹಿನಿಗೆ 2003ನೇ ಸಾಲಿನ ಆರ್ಯಭಟ ಪ್ರಶಸ್ತಿ ದೊರೆತಿದೆ. ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ರೂವಾರಿ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಹಾಗೂ ನಿರೂಪಣಾ ಸಾಹಿತ್ಯ ಒದಗಿಸಿರುವ ಶಾಮಸುಂದರ ಕುಲಕರ್ಣಿ ಅವರಿಗೂ ಪ್ರಶಸ್ತಿ ದೊರೆತಿದೆ.
ಈಟೀವಿಯಲ್ಲಿ ಪ್ರಸಾರವಾಗುತ್ತಿರುವ ‘ಮೂಡಲ ಮನೆ’ ಧಾರಾವಾಹಿಗೆ ಅತ್ಯುತ್ತಮ ಧಾರಾವಾಹಿ ಪ್ರಶಸ್ತಿ ದೊರೆತಿದೆ. ಇದೇ ಧಾರಾವಾಹಿಯಲ್ಲಿನ ನಟನೆಗಾಗಿ ಕೆ.ಎಸ್.ಎಲ್.ಸ್ವಾಮಿ (ರವಿ) ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ವೈಶಾಲಿ ಕಾಸರವಳ್ಳಿ (ಮೂಡಲ ಮನೆ) ಹಾಗೂ ಗಿರೀಶ್ ಕಾಸರವಳ್ಳಿ (ಗೃಹಭಂಗ) ದಂಪತಿಗಳು ಶ್ರೇಷ್ಠ ನಿರ್ದೇಶನ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮ ಏ.15ರ ಸಂಜೆ 5ರಿಂದ ಪ್ರಾರಂಭ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications