ಪ್ರಮೀಳಾ ನಾಮಪತ್ರ ತಿರಸ್ಕೃತ ; ಎಸ್. ಎಂ. ಕೃಷ್ಣ ಹಾದಿ ಸಲೀಸು
ಪ್ರಮೀಳಾ ನಾಮಪತ್ರ ತಿರಸ್ಕೃತ ; ಎಸ್. ಎಂ. ಕೃಷ್ಣ ಹಾದಿ ಸಲೀಸು
ಕೇಂದ್ರ ಚುನಾವಣಾ ಆಯೋಗಕ್ಕೆ ಮೊರೆಯಿಡಲು ಪ್ರಮೀಳಾ ನಿರ್ಧಾರ
ಪ್ರಮೀಳಾ ನೇಸರ್ಗಿ ಅವರ ಹೆಸರಿನಲ್ಲಿ ಪಕ್ಷದ ಬಿ ಫಾರಂ ಇರಲಿಲ್ಲ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಗತ್ಯವಾದ 10 ಮಂದಿಯ ಅನುಮೋದನೆಯನ್ನೂ ನಾಮಪತ್ರ ಒಳಗೊಂಡಿರಲಿಲ್ಲ ಎನ್ನುವ ಕಾರಣ ನೀಡಿ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಇದರಿಂದಾಗಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಗೆಲುವಿನ ದಾರಿ ಸಲೀಸಾಗಿದೆ.
ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಚಾಮರಾಜಪೇಟೆಯಲ್ಲಿ ಸ್ಪರ್ಧಿಸಿದ ಕಾರಣ, ನಟ ಮುಖ್ಯಮಂತ್ರಿ ಚಂದ್ರು ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿತ್ತು . ಆದರೆ ಇದಕ್ಕೂ ಮುನ್ನ ನೇಸರ್ಗಿ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು . ಈ ಗೊಂದಲದಲ್ಲಿ ಇಬ್ಬರ ನಾಮಪತ್ರಗಳೂ ಕಣದಲ್ಲಿ ಉಳಿದಿದ್ದವು. ಅಂತಿಮ ಗಳಿಗೆಯಲ್ಲಿ ನೇಸರ್ಗಿ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿ ಪ್ರಕಟಿಸಿತ್ತು . ಪ್ರಸ್ತುತ ನೇಸರ್ಗಿ ಅವರ ನಾಮಪತ್ರ ತಿರಸ್ಕೃತಗೊಂಡಿರುವುದರಿಂದ ಮುಖ್ಯಮಂತ್ರಿ ಚಂದ್ರು ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ.
ನೇಸರ್ಗಿ ದೂರು : ತಮ್ಮ ನಾಮಪತ್ರ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಪಾತ್ರವಿದೆ ಎಂದು ಪ್ರಮೀಳಾ ನೇಸರ್ಗಿ ಆಪಾದಿಸಿದ್ದಾರೆ. ಕೃಷ್ಣ ಅವರ ಒತ್ತಡದಿಂದಾಗಿ ಚುನಾವಣಾಧಿಕಾರಿ ತಮ್ಮ ನಾಮಪತ್ರ ತಿರಸ್ಕರಿಸಿದ್ದಾರೆ. ಈ ಕುರಿತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇನೆ. ಅಲ್ಲಿ ನ್ಯಾಯ ದೊರಕದಿದ್ದರೆ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ನೇಸರ್ಗಿ ತಿಳಿಸಿದ್ದಾರೆ. ಇದರಿಂದಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆಗೆ ಅಡಚಣೆ ಉಂಟಾಗುವ ಸಾಧ್ಯತೆಗಳಿವೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications