ಕುಟುಂಬ ರಾಜಕಾರಣ: ಬಂಗಾರಪ್ಪ , ದೇವೇಗೌಡ, ಶಾಮನೂರು!
ಕುಟುಂಬ ರಾಜಕಾರಣ: ಬಂಗಾರಪ್ಪ , ದೇವೇಗೌಡ, ಶಾಮನೂರು!
ರಾಜ್ಯ ರಾಜಕಾರಣಕ್ಕೂ ಮೆರಗು ತಂದ ಮನೆ-ಮನೆ ಮಹಾಭಾರತ
ಜಾತ್ಯತೀತ ಜನತಾದಳದ ಮುಖಂಡ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಕನಕಪುರಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇದೇ ಲೋಕಸಭಾ ಕ್ಷೇತ್ರದ ರಾಮನಗರ ವಿಧಾನ ಸಭಾ ಕ್ಷೇತ್ರದಿಂದ ಅವರ ಪುತ್ರ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಇನ್ನೋರ್ವ ಪುತ್ರ ರೇವಣ್ಣ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಈ ಮಕ್ಕಳು ಜಾತ್ಯತೀತ ಜನತಾದಳದ ಆಗುಹೋಗುಗಳ ನಿರ್ಣಾಯಕ ಶಕ್ತಿ ಎನ್ನುವುದು ಗಮನಾರ್ಹ.
1999ರ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಅವರಿಬ್ಬರು ಪುತ್ರರು ಸೋತು ಸುಣ್ಣವಾಗಿದ್ದರು. ದೇವೇಗೌಡರು ಹಾಸನದಲ್ಲಿ ಸೋತರೆ, ಕುಮಾರಸ್ವಾಮಿ ಸಾತನೂರಿನಿಂದ ಹಾಗೂ ರೇವಣ್ಣ ಹೊಳೆನರಸೀಪುರದಲ್ಲಿ ಸೋತಿದ್ದರು. ಆದರೆ ‘ಮಣ್ಣಿನ ಮಗ ’ ದೇವೇಗೌಡ ಕನಕಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಬಂದರು. ಮತ್ತೆ ಕನಕಪುರದಿಂದಲೇ ದೇವೇಗೌಡರು ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಉದಯ ಟೀವಿಯ ಹೆಣ್ಣುಮಗಳು ತೇಜಸ್ವಿನಿ ಕನಕಪುರದಲ್ಲಿ ಗೌಡರ ಎದುರಾಳಿ.
ಕಾಂಗ್ರೆಸ್ ಪಾಳಯದಲ್ಲಿ ....
ಅಪ್ಪ-ಮಗ ತಮ್ಮ ಕ್ಷೇತ್ರವನ್ನು ಅದಲು-ಬದಲು ಮಾಡಿಕೊಂಡಿರುವ ವಿಶೇಷ ಪ್ರಸಂಗಕ್ಕೆ ಕಾಂಗ್ರೆಸ್ ಸಾಕ್ಷಿಯಾಗಿದೆ. ಈ ಅದಲುಬದಲಿನ ಅಪ್ಪ-ಮಗ, ದಾವಣಗೆರೆ ಲೋಕಸಭಾ ಸದಸ್ಯ ಶ್ಯಾಮನೂರು ಶಿವಶಂಕರಪ್ಪ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ. ಈ ಚುನಾವಣೆಯಲ್ಲಿ ಮಗ ಲೋಕಸಭೆಗೆ ಸ್ಪರ್ಧಿಸಿದರೆ ಅಪ್ಪ ಶ್ಯಾಮನೂರು ಶಿವಶಂಕರಪ್ಪ ವಿಧಾನಸಭೆ ಆಕಾಂಕ್ಷಿ. ಇದು ಕುಟುಂಬದೊಳಗಿನ ಅದ್ಭುತ ಹೊಂದಾಣಿಕೆ.
ಕಳೆದ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಂಗೇರ ಅನುಜರ ಮಧ್ಯೆ ಸ್ಪರ್ಧೆಯೇರ್ಪಟ್ಟಿತ್ತು. ಅದು ಈ ವರ್ಷವು ಮುಂದುವರಿದಿದ್ದು ಸತತ ಮೂರನೇ ವರ್ಷಕ್ಕೆ ದಾಪುಗಾಲು ಹಾಕುತ್ತಿದೆ.
ಇನ್ನು ಸೊರಬದ ಸಮಾಚಾರ. ಶಾಮನೂರು ಕುಟುಂಬದಲ್ಲಿ ಸಾಧ್ಯವಾದ ಹೊಂದಾಣಿಕೆ ಬಂಗಾರಪ್ಪನವರ ಕುಟುಂಬದಲ್ಲಿ ಸಾಧ್ಯವಾಗದೆ ಹೋಗಿರುವುದರಿಂದ ಸೊರಬದ ಚುನಾವಣೆಗೆ ವಿಶೇಷ ರಂಗೇರಿದೆ. ಇಲ್ಲಿ ಕಾಂಗ್ರೆಸ್‌ನಿಂದ ಕುಮಾರ್ ಬಂಗಾರಪ್ಪ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯಿಂದ ಮಧು ಬಂಗಾರಪ್ಪ ಸ್ಪರ್ಧಿಸುತ್ತಿದ್ದಾರೆ. ಬಂಗಾರಪ್ಪನವರ ಬೆಂಬಲ ಮಧು ಬಂಗಾರಪ್ಪನವರಿಗೆ. ಇನ್ನು ಬಂಗಾರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳು. ಕುಮಾರ್ ಬಂಗಾರಪ್ಪ ಅಪ್ಪನ ವಿರುದ್ಧ ಪ್ರಚಾರಕ್ಕೆ ತಯಾರಾಗಿ ನಿಂತಿದ್ದಾರೆ.
ಈ ಕುಟುಂಬ ರಾಜಕೀಯದಲ್ಲಿ ಯಾರಿಗೆ ಗೆಲುವು ಯಾರಿಗೆ ಸೋಲು ಎನ್ನುವುದು ಜನತೆಯಲ್ಲಿ ಕುತೂಹಲ ಮೂಡಿಸಿದೆ.
ಬಂಗಾರಪ್ಪ ಈಟೀವಿಯ ಕಾರ್ಯಕ್ರಮವೊಂದರಲ್ಲಿ - ಅಪ್ಪ ಮಗ, ಅಣ್ಣ ತಮ್ಮ ಯಾರನ್ನೂ ಈ ಪ್ರಜಾಪ್ರಭುತ್ವ ಬಿಡುವುದಿಲ್ಲ ಎಂದಿದ್ದರು ಬಂಗಾರಪ್ಪ . ಅನುಭವದ ಮಾತಲ್ಲವೆ ?
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications