ಶಿವಮೊಗ್ಗದಿಂದ ಸ್ಪರ್ಧೆಯಿಲ್ಲ , ರಾಜಕೀಯ ಜಿಗುಪ್ಸೆ- ಯುಆರ್‌ಎ
ಶಿವಮೊಗ್ಗದಿಂದ ಸ್ಪರ್ಧೆಯಿಲ್ಲ , ರಾಜಕೀಯ ಜಿಗುಪ್ಸೆ- ಯುಆರ್‌ಎ
ಕಾಂಗ್ರೆಸ್‌ನಂಥ ಪಕ್ಷಕ್ಕೆ ವಾಜಪೇಯಿಯಂಥ ನಾಯಕ ಬೇಕಾಗಿತ್ತು
ನನಗೆ ಲೋಕಸಭೆಗೆ ಹೋಗುವ ಆಸೆಯೇನೂ ಇಲ್ಲ . ಮತೀಯ ಶಕ್ತಿಗಳ ವಿರುದ್ಧ ಹೋರಾಡುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಉದ್ದೇಶಿಸಿದ್ದೆ. ಆದರೆ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ಬೆಂಬಲ ನೀಡದ ಕಾರಣ ಈ ಸ್ಪರ್ಧೆ ಸಾಧ್ಯವಾಗಲಿಲ್ಲ ಎಂದು ಅನಂತಮೂರ್ತಿ ತಿಳಿಸಿದ್ದಾರೆ.
ಶಿವಮೊಗ್ಗ ಕ್ಷೇತ್ರದಲ್ಲಿ ಜಾ.ದಳದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಗಳನ್ನು ತಳ್ಳಿ ಹಾಕಿರುವ ಅನಂತಮೂರ್ತಿ, ಬಿಜೆಪಿ ವಿರೋಧಿ ಮತಗಳನ್ನು ಒಡೆಯಲು ನಾನು ಬಯಸಲಾರೆ ಎಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣ ಸಾಗುತ್ತಿರುವ ದಿಕ್ಕಿನ ಕುರಿತು ಖೇದ ವ್ಯಕ್ತಪಡಿಸಿರುವ ಅನಂತಮೂರ್ತಿ, ಕಾಂಗ್ರೆಸ್‌ನಂಥ ಐತಿಹಾಸಿಕ ಪಕ್ಷಕ್ಕೆ ವಾಜಪೇಯಿ ಅವರಂಥ ನಾಯಕರು ಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
ಇಟಲಿಯಲ್ಲಿ ಜನ್ಮ ತಾಳಿದ ಸೋನಿಯಾ ಗಾಂಧಿ ದೆಹಲಿಯಲ್ಲಿ ಹುಟ್ಟಿದವರಂತೆ ವರ್ತಿಸುತ್ತಿದ್ದಾರೆ. ಇತರ ಕೆಲವರು ಅಮೆರಿಕದಲ್ಲಿ ಹುಟ್ಟಿರುವಂತೆ ವರ್ತಿಸುತ್ತಿದ್ದಾರೆ ಎಂದು ಅನಂತಮೂರ್ತಿ ಟೀಕಿಸಿದರು.
ಮುಖ್ಯಮಂತ್ರಿ ಕೃಷ್ಣ ಅವರು ಸ್ವಕ್ಷೇತ್ರದಲ್ಲಿ ಜನರನ್ನು ಎದುರಿಸಲಾಗದೆ ಕೊನೆಯ ಕ್ಷಣದಲ್ಲಿ ಚಾಮರಾಜಪೇಟೆಗೆ ವಲಸೆ ಬಂದುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅನಂತಮೂರ್ತಿ ಹೇಳಿದರು. ಹೊಲಸು ರಾಜಕಾರಣದ ಬಗೆಗೆ ತಮಗೆ ಜಿಗುಪ್ಸೆ ಮೂಡುತ್ತಿರುವುದಾಗಿಯೂ ಅವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications