ಕೃಷ್ಣ ಅಧಿಕಾರಕ್ಕೆ ಮರಳಿದಲ್ಲಿ ಕೇಂದ್ರದ ವಿರುದ್ಧ ಸುಪ್ರಿಂಕೋರ್ಟ್‌ಗೆ
ಕೃಷ್ಣ ಅಧಿಕಾರಕ್ಕೆ ಮರಳಿದಲ್ಲಿ ಕೇಂದ್ರದ ವಿರುದ್ಧ ಸುಪ್ರಿಂಕೋರ್ಟ್‌ಗೆ
ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಕಾನೂನು ಕ್ರಮ
ಬರ ಪರಿಹಾರ ನಿಧಿ, ಆಹಾರ ಕಾಳುಗಳ ವಿತರಣೆ, ಅಭಿವೃದ್ಧಿ ಕಾಮಗಾರಿಗಳಿಗೆ ನಿಧಿ ಮಂಜೂರು ಸೇರಿದಂತೆ ರಾಜ್ಯದ ಅನೇಕ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ . ಅಗತ್ಯ ಬಿದ್ದಲ್ಲಿ ನ್ಯಾಯಕ್ಕಾಗಿ ಸುಪ್ರಿಂಕೋರ್ಟ್ ಮೆಟ್ಟಿಲು ಹತ್ತಲು ಚುನಾವಣೆ ನಂತರ ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದರು. ವಿಜಯದುಂದುಭಿ ಯಾತ್ರೆಯ ಎರಡನೇ ಹಂತದ ಅಂಗವಾಗಿ ಬಿಜಾಪುರಕ್ಕೆ ಆಗಮಿಸಿರುವ ಕೃಷ್ಣ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅನೇಕ ಬಾರಿ ಅಲವತ್ತುಕೊಂಡರೂ ಆಹಾರಧಾನ್ಯಗಳನ್ನು ಬಿಡುಗಡೆ ಮಾಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸಿತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಗೆ ಅನುಮತಿ ನೀಡಲು ಕೂಡ ಮೀನಾಮೇಷ ಎಣಿಸಿತು ಎಂದು ಕೃಷ್ಣ ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಮಂಗಳೂರಿಗೆ ವಿಚ್‌ಪಿಯ ಪ್ರವೀಣ್ ತೊಗಾಡಿಯಾ ಪ್ರವೇಶವನ್ನು ನಿರಾಕರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದ ಸುಪ್ರಿಂಕೋರ್ಟ್ ಆದೇಶವನ್ನು ಚರಿತ್ರಾರ್ಹ ಎಂದು ಬಣ್ಣಿಸಿದ ಕೃಷ್ಣ - ಈ ತೀರ್ಪಿನಿಂದಾಗಿ ಕೋಮುಶಕ್ತಿಗಳ ಚಟುವಟಿಕೆಗಳನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ಸಂಕಲ್ಪಕ್ಕೆ ಇನ್ನಷ್ಟು ಶಕ್ತಿ ಬಂದಿದೆ ಎಂದು ಬಣ್ಣಿಸಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications