ಕಣ್ಣಾಮುಚ್ಚಾಲೆಗೆ ಕೊನೆ : ಚಾಮರಾಜಪೇಟೆಯಿಂದ ಕೃಷ್ಣ ನಾಮಪತ್ರ
ಕಣ್ಣಾಮುಚ್ಚಾಲೆಗೆ ಕೊನೆ : ಚಾಮರಾಜಪೇಟೆಯಿಂದ ಕೃಷ್ಣ ನಾಮಪತ್ರ
ಮಾರ್ಕೆಟ್ ದೇವಿ ಕ್ಷೇತ್ರತ್ಯಾಗ, ಪ್ರಮೀಳಮ್ಮನ ಎದುರು ಕೃಷ್ಣ ಸ್ಪರ್ಧೆ
ಮಾ.31ರ ಬುಧವಾರ ಮಧ್ಯಾಹ್ನ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೃಷ್ಣ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ತಾವು ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರದ ಕುರಿತು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರು ಪಾಲಿಸಿಕೊಂಡು ಬಂದಿದ್ದ ರಹಸ್ಯ ಪಾಲನೆ ಬಯಲಾಯಿತು.
ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ , ಕೆಪಿಸಿಸಿ ಅಧ್ಯಕ್ಷ ಬಿ.ಜನಾರ್ಧನ ಪೂಜಾರಿ ಹಾಗೂ ಶಾಸಕ ಆರ್.ವಿ.ದೇವರಾಜ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದರು.
ಕಳೆದ ಚುನಾವಣೆಗಳಲ್ಲಿ ತವರು ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರವನ್ನು ಕೃಷ್ಣ ಪ್ರತಿನಿಧಿಸಿದ್ದರು. ಆದರೆ ಈ ಬಾರಿ ಹೆಚ್ಚು ಸುರಕ್ಷಿತ ಕ್ಷೇತ್ರಕ್ಕೆ ಒತ್ತುಕೊಟ್ಟ ಕೃಷ್ಣ - ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸದಿರುವ ನಿರ್ಧಾರ ಕೈಗೊಂಡಿದ್ದಾರೆ. ಶ್ರೀನಿವಾಸಪುರ, ಹುಲಿಯೂರು ದುರ್ಗ, ಸಾತನೂರು, ಬಸವನಗುಡಿ ಕ್ಷೇತ್ರಗಳಿಂದ ಕೃಷ್ಣ ಅವರು ಸ್ಪರ್ಧಿಸುವ ಕುರಿತು ವದಂತಿಗಳು ಸೃಷ್ಟಿಯಾಗಿದ್ದವು.
ಮುಖ್ಯಮಂತ್ರಿ ಕೃಷ್ಣ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ಹೇಳಿದ್ದರು. ಶ್ರೀನಿವಾಸಪುರ ಕ್ಷೇತ್ರದಿಂದ ಕೃಷ್ಣ ಸ್ಪರ್ಧಿಸುತ್ತಾರೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಪಾಳಯ ಸೇರಿರುವ ರಮೇಶ್‌ಕುಮಾರ್ ಹೇಳಿದ್ದರು. ಆದರೆ ಎಲ್ಲ ಹೇಳಿಕೆ ನಿರೀಕ್ಷೆಗಳನ್ನು ಸುಳ್ಳು ಮಾಡಿರುವ ಕೃಷ್ಣ ಚಾಮರಾಜಪೇಟೆಯಿಂದ ಕಣಕ್ಕಿಳಿದಿದ್ದಾರೆ.
ಚಾಮರಾಜಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಮೀಳಾ ನೇಸರ್ಗಿ ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ಕೆಎಸ್‌ಆರ್‌ಟಿಸಿ ಅಧ್ಯಕ್ಷರಾಗಿರುವ ಆರ್.ವಿ.ದೇವರಾಜ್ ಕಳೆದ ಚುನಾವಣೆಯಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾಗಿದ್ದರು.
(ಇನ್ಫೋ ವಾರ್ತೆ)
ಕೃಷ್ಣ ಕಣ್ಣಾಮುಚ್ಚಾಲೆ ಕುರಿತು ನೀವೇನಂತೀರಿ ?
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications