ಕನಕಪುರದಲ್ಲಿ ದೇವೇಗೌಡ ‘ಸುರಕ್ಷಿತ’, ಬೆಂ.ದಕ್ಷಿಣ ಜಯಂತಿ ಸ್ಪರ್ಧೆ
ಕನಕಪುರದಲ್ಲಿ ದೇವೇಗೌಡ ‘ಸುರಕ್ಷಿತ’, ಬೆಂ.ದಕ್ಷಿಣ ಜಯಂತಿ ಸ್ಪರ್ಧೆ
ಹಾಸನಕ್ಕೆ ಬೆನ್ನು ತೋರಿದ ಮಾಜಿ ಪ್ರಧಾನಿ ಪತ್ರಕರ್ತೆಯಾಂದಿಗೆ ‘ಮುಖಾಮುಖಿ’
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವವರೆಗೂ ಕಾದ ಮಾಜಿ ಪ್ರಧಾನಿ ದೇವೇಗೌಡರು, ಪಕ್ಷದ ನಾಯಕರು ಹಾಗೂ ಗೆಳೆಯರೊಂದಿಗಿನ ಮಂತ್ರಾಲೋಚನೆಯ ನಂತರ ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಮಾ.31ರ ಬುಧವಾರ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರ ಹಾಜರಿಯಲ್ಲಿ ದೇವೇಗೌಡರು ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ದೇವೇಗೌಡರು ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಅವರ ಪುತ್ರರಾದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಹಾಜರಿದ್ದರು. ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ- ತಮಗೆ ರಾಜಕೀಯ ಪುನರ್ಜನ್ಮ ನೀಡಿದ ಕನಕಪುರ ಲೋಕಸಭಾ ಕ್ಷೇತ್ರವನ್ನು ಮತ್ತೆ ಆಯ್ದುಕೊಂಡಿರುವುದಾಗಿ ತಿಳಿಸಿದರು. 1999ರ ಉಪ ಚುನಾವಣೆಯಲ್ಲಿ ಜನತಾ ಪರಿವಾರದ ಒಮ್ಮತದ ಅಭ್ಯರ್ಥಿಯಾಗಿ ದೇವೇಗೌಡ ಕನಕಪುರದಲ್ಲಿ ಜಯಗಳಿಸಿದ್ದರು.
ಈ ಮುನ್ನ ಹಾಸನ ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸುವ ಸುದ್ದಿಗಳು ಜಾತ್ಯತೀತ ಜನತಾದಳ ವಲಯದಲ್ಲಿ ಹೇರಳವಾಗಿದ್ದವು. ಹಾಸನದ ದಳ ಅಭಿಮಾನಿಗಳು ಕೂಡಾ ದೇವಗೌಡರ ಸ್ಪರ್ಧೆಗಾಗಿ ಒತ್ತಡ ಹೇರಿದ್ದರು. ಹಾಸನದಲ್ಲಿ ಕಾಂಗ್ರೆಸ್ ಪಕ್ಷದಿಂದ ದೇವೇಗೌಡರ ಕಟ್ಟಾ ವಿರೋಧಿಗಳಲ್ಲೊಬ್ಬರಾದ ಎಚ್.ಸಿ.ಶ್ರೀಕಂಠಯ್ಯ ಸ್ಪರ್ಧಿಸುತ್ತಿದ್ದಾರೆ.
ಕನಕಪುರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಉದಯ ಟೀವಿ ಪತ್ರಕರ್ತೆ ತೇಜಸ್ವಿನಿ ಶ್ರೀರಮೇಶ್ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ವತಿಯಿಂದ ಹಿರಿಯ ಮುಖಂಡ ರಾಮಚಂದ್ರಗೌಡ ಕಣಕ್ಕಿಳಿದಿದ್ದಾರೆ.
ಬೆಂಗಳೂರು ದಕ್ಷಿಣದಿಂದ ಜಯಂತಿ : ಖ್ಯಾತ ಅಭಿನೇತ್ರಿ ಜಯಂತಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ್ ಸ್ಪರ್ಧಿಸುತ್ತಿರುವುದು ಗಮನಾರ್ಹ.
(ಏಜನ್ಸೀಸ್)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications