ಬೆಂಗಳೂರ ಪ್ರತಿಷ್ಠಿತ ಕೊಳೆಗೇರಿಗಳಲ್ಲಿ ಜನಸಂಖ್ಯೆ ದಿಢೀರ್ ಹೆಚ್ಚಳ
ಬೆಂಗಳೂರ ಪ್ರತಿಷ್ಠಿತ ಕೊಳೆಗೇರಿಗಳಲ್ಲಿ ಜನಸಂಖ್ಯೆ ದಿಢೀರ್ ಹೆಚ್ಚಳ
ಕೊಳೆಗೇರಿಯೆಂಬ ಹುಲ್ಲುಗಾವಲಲ್ಲಿ ಕನಸುಗಳ ಬಿತ್ತುವ ರಾಜಕಾರಣಿ
ವೋಟುಗಳ ಹಸಿವೆಯಿಂದ ಹಪಹಪಿಸುತ್ತಿರುವ ರಾಜಕಾರಣಿಗಳು, ತಮ್ಮ ಕ್ಷೇತ್ರಗಳಲ್ಲಿನ ಖಾಲಿ ಜಾಗಗಳನ್ನು ಕೊಳಗೇರಿಯನ್ನಾಗಿ ಪರಿವರ್ತಿಸುತ್ತಿದ್ದಾರೆ. ಕಾರಣ ಆ ಕೊಳಗೇರಿ ಪ್ರದೇಶಗಳೇ ಅವರುಗಳ ಸಾಂಪ್ರದಾಯಿಕ ‘ವೋಟ್ ಬ್ಯಾಂಕ್’ ಆಗಿದೆ. ಚುನಾವಣೆಯ ದಿನಾಂಕ ಘೋಷಿತವಾಗಿರುವುದರಿಂದ, ಕೆಲವು ರಾಜಕಾರಣಿಗಳು ಖಾಲಿ ಜಾಗಗಳಲ್ಲಿ, ಪಾರ್ಕುಗಳಲ್ಲಿ ಮತ್ತು ಫುಟ್‌ಪಾತ್‌ಗಳನ್ನೂ ಬಿಡದೆ ಕಂಡ ಕಂಡಲ್ಲಿ ಗುಡಿಸಲುಗಳನ್ನು ಕಟ್ಟಿಕೊಟ್ಟು ಕೊಳಗೇರಿ ಜನಗಳ ಕಣ್ಣಲ್ಲಿ ‘ಮಹಾನುಭಾವ’ರೆನಿಸಲು ಹೊರಟಿದ್ದಾರೆ.
ನಾಟಕ ಅಲ್ಲಿಗೇ ಮುಗಿಯುವುದಿಲ್ಲ . ‘ನಾವೇನಾದ್ರೂ ಗೆದ್ದು ಗದ್ದುಗೆಯೇರಿದರೆ ನಿಮಗೆಲ್ಲರಿಗೂ ಮನೆ ಕಟ್ಟಿಕೊಳ್ಳಲು ಎಲ್ಲ ಸವಲತ್ತುಗಳನ್ನೂ ಒದಗಿಸುತ್ತೇವೆ’ ಎಂಬ ಆಶ್ವಾಸನೆಯೂ ರಾಜಕಾರಣಿಗಳಿಂದ ದೊರೆಯುತ್ತಿದೆ. ಮಹಾನಗರ ಪಾಲಿಕೆಯಾದರೂ ಏನು ಮಾಡೀತು ? ಕೊಳೆಗೇರಿಗಳ ತಂಟೆಗೆ ಬಾರದಂತೆ ಪಾಲಿಕೆಯ ಬಾಯನ್ನು ರಾಜಕಾರಣಿಗಳು ಮುಚ್ಚಿಬಿಟ್ಟಿದ್ದಾರೆ !
ಒಂದು ಉದಾಹರಣೆ ನೋಡಿ : ಪಾಲಿಕೆಯ ಒಡೆತನದಲ್ಲಿರುವ ಜಯನಗರದ 5ನೇ ಬ್ಲಾಕ್‌ನ ಮಾರೇನಹಳ್ಳಿ ಟ್ಯಾಂಕ್ ಬಂಡ್ ಪ್ರದೇಶದಲ್ಲಿ ಹತ್ತಾರು ಚಿಕ್ಕ ಚಿಕ್ಕ ಗುಡಿಸಲುಗಳು ತಲೆ ಎತ್ತಿವೆ. ಇವರುಗಳಿಗೆ ಅಲ್ಲಿನ ಕಾರ್ಪೊರೇಟರ್ ಮಹಾಶಯರ ಅಭಯ ಹಸ್ತವಿದೆ. ಕುತೂಹಲಕರ ವಿಷಯವೆಂದರೆ ಅಲ್ಲಿನ ಕಾರ್ಪೊರೇಟರ್ ಆಡಳಿತ ಪಕ್ಷದವರಲ್ಲದಿದ್ದರೂ ಸದಾ ಅವರಿಗೆ ಮಂತ್ರಿವರ್ಯರ ಕೃಪಾಕಟಾಕ್ಷವಿದೆ.
ಮಹಾನಗರ ಪಾಲಿಕೆಯ ಅಧಿಕಾರಿಗಳು ಖಾಲಿ ಜಾಗಗಳ ಈ ಅತಿಕ್ರಮಣ ಪ್ರವೇಶವನ್ನು ನಿಲ್ಲಿಸುವಂತೆ ಸಂಬಂಧಪಟ್ಟ ಕಾರ್ಪೊರೇಟರ್‌ಗೆ ತಿಳಿಸಲಾಗಿದೆ. ಆದರೂ ಕೊಳಗೇರಿ ಜನಗಳೇ ಅವರ ‘ವೋಟ್ ಬ್ಯಾಂಕ್’ ಆಗಿರುವುದರಿಂದ ಅವರಿಗೆ ಆಹಾರ ಸಾಮಗ್ರಿ, ವಸತಿ ಸೌಕರ್ಯ, ದುಡ್ಡು ಕೊಡಲಾಗುತ್ತಿದೆ.
ಜಯನಗರದ ತಿಲಕ್ ನಗರ ಮುಖ್ಯ ರಸ್ತೆಯ ಬದಿಗಳಲ್ಲಿ ಗುಡಿಸಲುಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಪಾದಚಾರಿಗಳು ರಸ್ತೆಯಲ್ಲಿ ನಡೆಯುವಂತಾಗಿದೆ. ಹೀಗಿದ್ದೂ ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿರಲು ಮೇಲಿಂದ ಅಪ್ಪಣೆಯಾಗಿದೆ.
ಕಳೆದ ಕೆಲವೇ ದಿನಗಳಲ್ಲಿ ಕೊಳೆಗೇರಿ ಪ್ರದೇಶ, ವೇಗದಲ್ಲಿ ಹೆಚ್ಚುತ್ತಿದೆ. ಅಲ್ಲದೇ ಒಂದೇ ಕಡೆ ಹೆಚ್ಚು ಜನರನ್ನು ಇರುವಂತೆ ಮಾಡಲಾಗುತ್ತಿದೆ. ಜೆ.ಪಿ. ನಗರದ ರಾಗಿಗುಡ್ಡ ಕೊಳಗೇರಿ, ಇಂದಿರಾಪ್ರಿಯದರ್ಶಿನಿ ಕೊಳಗೇರಿ, ಗುಲ್ಬರ್ಗಾ ಕೊಳಗೇರಿ ಮತ್ತು ಬಿಟಿಬಿ ಕೊಳಗೇರಿಯ ಜನವಸತಿ ಸಂಖ್ಯೆ ಕಳೆದ ಕೆಲ ದಿನಗಳಲ್ಲಿಯೇ ದ್ವಿಗುಣಗೊಂಡಿದೆ.
ಇತ್ತೀಚೆಗೆ, ಒಂದು ಪ್ರಮುಖ ರಾಷ್ಟ್ರೀಯ ಪಕ್ಷವು, ಬೆಂಗಳೂರಿನ ಅತಿದೊಡ್ಡ ಕೊಳಗೇರಿಯಲ್ಲಿನ ಜನರಿಗೆ ಬಟ್ಟೆ-ಬರೆಗಳನ್ನು ವಿತರಿಸಿದೆ. ಈ ವಿತರಣೆ ಚುನಾವಣೆವರೆಗೂ ಕಂತುಕಂತಾಗಿ ಮುಂದುವರಿಯಲಿದೆ. ‘ಕಂಡೋರ ಮದುವೇಲಿ ಉಂಡೋನೇ ಜಾಣ’ ಎನ್ನುವಂತೆ ಕೊಳೆಗೇರಿ ನಿವಾಸಿಗಳು ಖುಷಿಯಾಗಿದ್ದಾರೆ. ಆ ಖುಷಿ ಚುನಾವಣೆವರೆಗೆ ಮಾತ್ರ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications